ಸುರತ್ಕಲ್ನ ಸಸಿಹಿತ್ಲುನಲ್ಲಿ ರಾಜ್ಯದ ಮೊದಲ ಮತ್ಸ್ಯಗ್ರಾಮ ನಿರ್ಮಾಣ: ಮಟ್ಟಾರು ರತ್ನಾಕರ ಹೆಗ್ಡೆ

ಮಟ್ಟಾರು ರತ್ನಾಕರ ಹೆಗ್ಡೆ
ಮಂಗಳೂರು, ಸೆ.26: ಕೇಂದ್ರ ಸರಕಾರದ ಮತ್ಸ್ಯಸಂಪದ ಯೋಜನೆಯಡಿ ಕರಾವಳಿಯಲ್ಲಿ ಮತ್ಸ್ಯ ಗ್ರಾಮ ನಿರ್ಮಾಣ ಮಾಡಲು ನಿರ್ದೇಶನವಿದೆ. ಅದರಂತೆ ರಾಜ್ಯದ ಮೊತ್ತ ಮೊದಲ ಮತ್ಸ್ಯ ಗ್ರಾಮವನ್ನು ಸುರತ್ಕಲ್ ಸಮೀಪದ ಸಸಿಹಿತ್ಲುವಿನಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದ.ಕ. ಜಿಲ್ಲಾಡಳಿತವು ಸಸಿಹಿತ್ಲುವಿನಲ್ಲಿ ಜಂಗಲ್ ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ 29 ಎಕರೆ ಜಮೀನು ಮೀಸಲಿಟ್ಟಿದೆ. ಅದರಲ್ಲಿ 5 ಎಕರೆಯಲ್ಲಿ ಮತ್ಸ್ಯಗ್ರಾಮಕ್ಕೆ ನೀಡಲು ಒಪ್ಪಿಗೆ ಸೂಚಿಸಿದೆ. ಮತ್ಸ್ಯಗ್ರಾಮದ ನಿರ್ಮಾಣಕ್ಕೆ 7.5 ಕೋ.ರೂ. ಅನುದಾನ ಲಭ್ಯವಾಗಲಿದ್ದು, ಕೇಂದ್ರ ಸರಕಾರದಿಂದ ಶೇ.60 ಮತ್ತು ರಾಜ್ಯದಿಂದ ಶೇ.40ರಷ್ಟು ಮೊತ್ತ ಬಿಡುಗಡೆಯಾಗಲಿದೆ. ಮತ್ಸ್ಯಗ್ರಾಮದಲ್ಲಿ ಬೋಟ್ಗಳಿಂದ ಮೀನು ಇಳಿಸಲು ಜಟ್ಟಿ, ಮಾರುಕಟ್ಟೆ, ಮೀನು ಒಣಗಿಸಲು ವ್ಯವಸ್ಥೆ, ಐಸ್ಪ್ಲ್ಯಾಂಟ್, ಬಲೆ ನಿರ್ಮಾಣಕ್ಕೆ ಜಾಗ, ಪಾರ್ಕ್, ವಿಶ್ರಾಂತಿ ಗೃಹ, ಹೋಟೆಲ್ ಇತ್ಯಾದಿ ಇರಲಿವೆ ಎಂದರು.
ಸಸಿಹಿತ್ಲುವಿನಲ್ಲಿ ಮತ್ಸ್ಯಗ್ರಾಮದ ನಿರ್ಮಾಣದ ಬಳಿಕ ಮಲ್ಪೆ, ಕಾರವಾರ ಮತ್ತು ಹೊನ್ನಾವರದಲ್ಲಿಯೂ ಜಮೀನಿನ ಲಭ್ಯತೆಯ ಮೇಲೆ ಮತ್ಸ್ಯಗ್ರಾಮ ನಿರ್ಮಿಸಲಾಗುವುದು. ಯುವ ಮಹಿಳಾ ಮೀನುಗಾರರ ಸ್ವಸಹಾಯ ಸಂಘ ಆರಂಭಿಸಿ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಸಾಲ ಒದಗಿಸಿ, ಮೀನು ಖರೀದಿ ಮಾರಾಟಕ್ಕೆ ಸಹಾಯ ಮಾಡಲು ಉದ್ದೇಶಿಸಲಾಗಿದೆ. ಮಹಿಳಾ ಮೀನುಗಾರರಿಗೆ ದೂರದ ಪ್ರದೇಶಗಳಿಗೆ ತಾವೇ ಸ್ವತಃ ವಾಹನ ಚಲಾಯಿಸಿಕೊಂಡು ಹೋಗಿ ಮಾರಾಟ ಮಾಡಲು ಅನುಕೂಲವಾಗುವಂತೆ ಶಿಥಲೀಕರಣ ಬಾಕ್ಸ್ ಒಳಗೊಂಡ ವಾಹನವನ್ನು ಒದಗಿಸಲು ಉದ್ದೇಶಿಸಲಾಗಿದೆ. ಡಿಪಿಆರ್ನಲ್ಲಿ ಒಂದು ವಾಹನಕ್ಕೆ 8 ಲಕ್ಷ ರೂ. ಅಂದಾಜಿಸಲಾಗಿದೆ. ಒಣ ಮೀನು ಬೇಸಾಯಕ್ಕೆ ಸಂಬಂಧಿಸಿ ಮಂಗಳೂರು, ಮಲ್ಪೆ ಮತ್ತು ಹೊನ್ನಾವರದಲ್ಲಿ ಜಾಗ ಅಂತಿಮಗೊಳಿಸಲಾಗುವುದು ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ತೂಗು ಸೇತುವೆ ನಿರ್ಮಾಣ
ಪ್ರಾಧಿಕಾರದಿಂದ ಈಗಾಗಲೇ ಹಲವು ಕಡೆಗಳಲ್ಲಿ ಹೊಸ ಮೀನು ಮಾರುಕಟ್ಟೆ, ಉದ್ಯಾನವನ, ಕಾಲು ಸಂಕ ನಿರ್ಮಿಸಲಾಗಿದೆ. ಉತ್ತರ ಕನ್ನಡ, ಬೈಂದೂರು, ಕುಂದಾಪುರ, ಸುಳ್ಯ ಭಾಗಗಳಲ್ಲಿ ಕಾಲು ಸಂಕಗಳಿಗೆ ಹೆಚ್ಚಿನ ಬೇಡಿಕೆಯಿದೆ. 1 ಕೋ. ರೂ. ವೆಚ್ಚದಲ್ಲಿ ಭಟ್ಕಳದ ಅಳಿವೆ ಕೋಡಿ ಮತ್ತು ಹೆಜಮಾಡಿ ಬಳಿ ಶಾಂಭವಿ ನದಿಗೆ, ೬೦ ಲಕ್ಷ ರೂ. ವೆಚ್ಚದಲ್ಲಿ ಪುತ್ತೂರಿನ ಬೆಟ್ಟಂಪಾಡಿ ಮತ್ತು ಸುಳ್ಯದ ಗೌರಿ ಹೊಳೆಗೆ ತೂಗುಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯೆ ಕೇಸರಿ ಯುವರಾಜ್, ಸದಸ್ಯ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ವಿಶೇಷ ಅಧಿಕಾರಿ ಪವನ್ ಶೆಟ್ಟಿ ಉಪಸ್ಥಿತರಿದ್ದರು.