ಉಡುಪಿ: ಶ್ರೀಕೃಷ್ಣ ಮಠದಲ್ಲಿ ಹರಿಕಥಾ ಕಾರ್ಯಕ್ರಮ ಸಮಾರೋಪ

ಉಡುಪಿ, ಸೆ.26: ಉಡುಪಿ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ಕಾರ್ಕಳದ ಶ್ರೀಹಂಡೆದಾಸ ಪ್ರತಿಷ್ಠಾನ ಇವರ ವತಿಯಿಂದ ಕಳೆದ 19 ದಿನಗಳ ಕಾಲ ನಡೆದ ಹರಿಕಥಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು ಸಂಜೆ ನಡೆಯಿತು.
ಶ್ರೀವಾದಿರಾಜ ವಿರಚಿತ ‘ಶ್ರೀರುಗ್ಮಿಣೀಶ ವಿಜಯ’ ಮಹಾಕಾವ್ಯ ಆಧಾರಿತ ವಾಗಿ ಕಳೆದ 19 ದಿನಗಳ ಕಾಲ ಪ್ರತಿದಿನ ಸಂಜೆ ಹರಿಕಥಾ ಕಾರ್ಯಕ್ರಮ ನಡೆದಿತ್ತು.
ಸಮಾರೋಪದಲ್ಲಿ ಆಶೀರ್ವಚನ ನೀಡಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು, ರೋಚಕಥೆಯೊಂದಿಗೆ, ಶಾಸ್ತ್ರದ ಮೂಲಕ ಭಗವಂತನ ವರ್ಣನೆ ಮತ್ತು ಸಮಾಜದ ಉದ್ಧಾರಕ್ಕೆ ಕಾರಣ ವಾಗಿರುವ ಶ್ರೀವಾದಿರಾಜರು ರಚಿಸಿರುವ ‘ಶ್ರೀರುಗ್ಮಿಣೀಶ ವಿಜಯ’ದ ಹರಿಕಥಾ ಶ್ರವಣದಿಂದ ಎಲ್ಲರಿಗೂ ಭಗವಂತನ ಅನುಗ್ರಹವಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಹಂಡೆದಾಸ ಪ್ರತಿಷ್ಠಾನದ ಸಲಹೆಗಾರರಾದ ಪ್ರೊ. ಎಂ.ಎಲ್. ಸಾಮಗ, ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ, ಹಂಡೆದಾಸ ಪ್ರತಿಷ್ಠಾನದ ಅಧ್ಯಕ್ಷೆ ರುಕ್ಮಿಣಿ ಹಂಡೆ, ಉಪಾಧ್ಯಕ್ಷ ವಿದ್ವಾನ್ ವೇದವ್ಯಾಸ ಐತಾಳ್ ಭಾಗವಹಿಸಿದ್ದರು.
ಪ್ರತಿಷ್ಠಾನದ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿ, ವಿದ್ವಾನ್ ರಾಘವೇಂದ್ರ ಉಪಾಧ್ಯಾಯರು ಸ್ವಾಗತಿಸಿ, ವೀಣಾ ಹೆಬ್ಬಾರ್ ವಂದಿಸಿದರು.





