ಮ.ಪ್ರ:ಕುರ್ಚಿಯಲ್ಲಿ ಕುಳಿತಿದ್ದಕ್ಕಾಗಿ ದಲಿತ ವ್ಯಕ್ತಿಗೆ ಗುಂಪಿನಿಂದ ಥಳಿತ; ಆರೋಪ
ಪೊಲೀಸರ ನಿರಾಕರಣೆ

PHOTO: PTI
ಹಾಥ್ಪುರ,ಸೆ.26: ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿನ ಗ್ರಾಮ ಪಂಚಾಯತ ಕಚೇರಿಯಲ್ಲಿ ಕುರ್ಚಿಯಲ್ಲಿ ಕುಳಿತಿದ್ದಕ್ಕಾಗಿ 30ರ ಹರೆಯದ ದಲಿತ ವ್ಯಕ್ತಿಯನ್ನು ಗುಂಪೊಂದು ಥಳಿಸಿದ್ದಾಗಿ ಸಂತ್ರಸ್ತನ ಕುಟುಂಬವು ಆರೋಪಿಸಿದೆ.
ಆದರೆ,ಕುಟುಂಬದ ಆರೋಪವನ್ನು ಸೋಮವಾರ ನಿರಾಕರಿಸಿದ ಬಿಜಾವರ್ ಡಿಎಸ್ಪಿ ರಘು ಕೇಸರಿ ಅವರು,ಶನಿವಾರ ನಡೆದ ಘಟನೆಗೆ ದಲಿತ ವ್ಯಕ್ತಿ ಮತ್ತು ಆರೋಪಿಗಳ ನಡುವಿನ ವೈಷಮ್ಯ ಕಾರಣವಾಗಿತ್ತು ಎಂದು ಹೇಳಿದರು.
ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಆರೋಪಿಗಳ ಬಂಧನಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಚೌಕಾ ಗ್ರಾಮದಲ್ಲಿ ಈ ಘಟನೆಯು ನಡೆದಿದ್ದು,ಸಂತ್ರಸ್ತ ತೀವ್ರವಾಗಿ ಗಾಯಗೊಂಡಿರುವುದಾಗಿ ಆತನ ಪತ್ನಿ ಮತ್ತು ಪಂಚಾಯತ್ ಅಧಿಕಾರಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತ ವ್ಯಕ್ತಿಯ ಪತ್ನಿ,ತನ್ನ ಪತಿ ಗ್ರಾಮ ಪಂಚಾಯತ್ಕಚೇರಿಯಲ್ಲಿನ ಕುರ್ಚಿಯಲ್ಲಿ ಕುಳಿತ ಬಳಿಕ ರೋಹಿತ್ ಸಿಂಗ್ ಠಾಕೂರ್ ಎಂಬಾತ ಆತನನ್ನು ಥಳಿಸಿದ್ದ ಮತ್ತು ಆತನ ಸಹಚರರೂ ಕೈಜೋಡಿಸಿದ್ದರು. ತನ್ನೆದುರು ದಲಿತ ವ್ಯಕ್ತಿಯೋರ್ವ ಕುರ್ಚಿಯಲ್ಲಿ ಕುಳಿತಿದ್ದನ್ನು ಆಕ್ಷೇಪಿಸಿದ್ದ ಠಾಕೂರ್,ಕೇವಲ ಠಾಕೂರ್ಗಳು ಮಾತ್ರ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಅಬ್ಬರಿಸಿದ್ದ ಎಂದು ತಿಳಿಸಿದರು.ತನ್ನ ಕುಟುಂಬದ ಸುರಕ್ಷತೆಯ ಬಗ್ಗೆ ತಾನು ಭೀತಿಗೊಂಡಿದ್ದೇನೆ ಎಂದು ಹೇಳಿದ ಆಕೆ,ತಾನು ಪೊಲೀಸರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದರು.
ದಲಿತ ವ್ಯಕ್ತಿ ಕಪಿಲ ಧಾರಾ ಯೋಜನೆಯಡಿ ಬಾವಿ ನಿರ್ಮಾಣಕ್ಕೆ ಅನುಮತಿ ಕೋರಿ ದಾಖಲೆಗಳನ್ನು ಸಲ್ಲಿಸಲು ಕಚೇರಿಗೆ ಬಂದಿದ್ದ. ಆತ ಕುರ್ಚಿಯಲ್ಲಿ ಕುಳಿತಿದ್ದನ್ನು ಆಕ್ಷೇಪಿಸಿ ಠಾಕೂರ್ ಆತನನ್ನು ಥಳಿಸಿದ್ದ ಎಂದು ಗ್ರಾಮ ಪಂಚಾಯತ್ ಕಾರ್ಯದರ್ಶಿ ಅರವಿಂದ ಕುಮಾರ್ ಅಹಿರ್ವಾರ್ ತಿಳಿಸಿದರು. ರವಿವಾರವೂ ಠಾಕೂರ್ ತನ್ನಿಬ್ಬರು ಸಹಚರರೊಂದಿಗೆ ದಲಿತ ವ್ಯಕ್ತಿಯ ಮನೆಗೆ ನುಗ್ಗಿ ಮತ್ತೆ ಆತನನ್ನು ಥಳಿಸಿದ್ದ ಎಂದು ಅವರು ಆರೋಪಿಸಿದರು. ಸಂತ್ರಸ್ತ ವ್ಯಕ್ತಿ ಕಾರಿನಲ್ಲಿ ಬಂದು ಪಂಚಾಯತ್ ಕಚೇರಿಯಲ್ಲಿನ ಕುರ್ಚಿಯಲ್ಲಿ ಕುಳಿತಿದ್ದಕ್ಕಾಗಿ ಗುಂಪು ಆತನನ್ನು ಥಳಿಸಿದೆ ಎಂದು ಗ್ರಾಮದ ಸರಪಂಚ ಕೃಷ್ಣ ಗೋಪಾಲ ಅಹಿರ್ವಾರ್ ತಿಳಿಸಿದರು.







