ಪತಿಯ ಎದುರಿನಲ್ಲೇ ಮಹಿಳೆಯ ಸಾಮೂಹಿಕ ಅತ್ಯಾಚಾರ: ಆರು ಮಂದಿ ಆರೋಪಿಗಳ ಬಂಧನ

ಮೇದಿನಿನಗರ,ಸೆ.26: ಜಾರ್ಖಂಡ್‌ನ ಪಲಾಮು ಜಿಲ್ಲೆಯ ಬಕೋರಿಯಾ ಭಲುಯಾಹಿ ಕಣಿವೆಯ ಸಮೀಪ ಆರು ಜನರ ಗುಂಪೊಂದು ಪತಿಯ ಎದುರಿನಲ್ಲೇ 22ರ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಎಲ್ಲ ಆರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪಲಾಮು ಎಸ್‌ಪಿ ಚಂದನಕುಮಾರ ಸಿನ್ಹಾ ತಿಳಿಸಿದರು.
ಶನಿವಾರ ಪಲಾಮು ಜಿಲ್ಲೆಯ ಪಟನ್ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿಯ ಅತ್ತೆಯ ಮನೆಯಲ್ಲಿ ಜಗಳದ ಬಳಿಕ ಮಹಿಳೆ ಪಕ್ಕದ ಲಾತೇಹಾರ್ ಜಿಲ್ಲೆಯಲ್ಲಿರುವ ತವರು ಮನೆಗೆ ಕಾಲ್ನಡಿಗೆಯಲ್ಲಿ ತೆರಳಿದ್ದಳು. ಬೈಕ್‌ನಲ್ಲಿ ಆಕೆಗಾಗಿ ಹುಡುಕಾಡುತ್ತಿದ್ದ ಪತಿ ಮತ್ತು ಆತನ ಸಂಬಂಧಿ ರಾತ್ರಿ ಎಂಟು ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಕೆಯನ್ನು ಪತ್ತೆ ಹಚ್ಚಿದ್ದರು. ಮನೆಗೆ ಮರಳುವಂತೆ ಆತ ಆಕೆಯನ್ನು ಮನವೊಲಿಸುತ್ತಿದ್ದಾಗ ಬೈಕ್‌ಗಳಲ್ಲಿ ಆಗಮಿಸಿದ್ದ ಆರೋಪಿಗಳು ಆತನನ್ನು ಮತ್ತು ಸಂಬಂಧಿಯನ್ನು ಥಳಿಸಿ,ಬಳಿಕ ಮಹಿಳೆಯನ್ನು ಪಕ್ಕದ ನಿರ್ಜನ ಸ್ಥಳಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ಪೈಕಿ ಇಬ್ಬರು ತನಗೆ ಗೊತ್ತು ಎಂದು ಸಂತ್ರಸ್ತೆಯ ಪತಿ ತಿಳಿಸಿದ್ದಾನೆ.
ಆರೋಪಿಗಳ ಥಳಿತದಿಂದ ಪತಿ ತೀವ್ರವಾಗಿ ಗಾಯಗೊಂಡಿದ್ದರೆ ಸಂಬಂಧಿ ಪ್ರಜ್ಞೆಯನ್ನು ಕಳೆದುಕೊಂಡಿದ್ದ. ಪತಿ ಅಪರಾಧ ಸ್ಥಳವನ್ನು ತಲುಪಿದಾಗ ಆರೋಪಿಗಳು ಮಹಿಳೆಯನ್ನು ಬೈಕ್‌ನಲ್ಲಿ ಬೇರೆ ಸ್ಥಳಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಬೈಕ್ ಎದುರಿನಿಂದ ಬಂದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದು,ಮಹಿಳೆ ರಕ್ಷಣೆಗಾಗಿ ಕೂಗಿಕೊಂಡಿದ್ದಳು. ಧಾವಿಸಿ ಬಂದ ಸ್ಥಳೀಯರು ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.ಪರಾರಿಯಾಗಿದ್ದ ಇತರ ನಾಲ್ವರನ್ನು ಸೋಮವಾರ ಬಂಧಿಸಲಾಗಿದೆ ಎಂದು ಸಿನ್ಹಾ ತಿಳಿಸಿದರು.