ಯೂಟ್ಯೂಬರ್ ಧ್ರುವ್ ವೀಡಿಯೋ ಸೇರಿದಂತೆ 45 ವೀಡಿಯೋಗಳನ್ನು ನಿರ್ಬಂಧಿಸಲು ಯೂಟ್ಯೂಬ್‌ಗೆ ಸೂಚಿಸಿದ ಕೇಂದ್ರ

ಹೊಸದಿಲ್ಲಿ: ದೇಶದ ಸಾರ್ವಭೌಮತೆ, ಭದ್ರತೆ, ಜಾಗತಿಕ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣ ನೀಡಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು 10 ಚಾನೆಲ್‌ಗಳ 45 ವೀಡಿಯೋಗಳನ್ನು ನಿರ್ಬಂಧಿಸುವಂತೆ ಯೂಟ್ಯೂಬ್‌ಗೆ(YouTube) ಸೂಚನೆ ನೀಡಿದ್ದು ಈ ವೀಡಿಯೋಗಳಲ್ಲಿ ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಥೀ(Dhruv Rathee) ಅವರ "ವೈ ಇಮ್ರಾನ್ ಖಾನ್ ಲಾಸ್ಟ್? ಪೊಲಿಟಿಕಲ್ ಕ್ರೈಸಿಸ್ ಇನ್ ಪಾಕಿಸ್ತಾನ್,'' ಎಂಬ ಶೀರ್ಷಿಕೆಯ ವೀಡಿಯೋ ಕೂಡ ಸೇರಿದೆ. ಈ ವೀಡಿಯೋದಲ್ಲಿ ಭಾರತದ ಕೆಲ ಭೂಭಾಗಗಳನ್ನು ಪಾಕಿಸ್ತಾನದಲ್ಲಿರುವಂತೆ ತೋರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ನಿರ್ಬಂಧಿಸುವಂತೆ ಸೂಚಿಸಲಾದ ಕೆಲ ವೀಡಿಯೋಗಳು ದೇಶದಲ್ಲಿ ಕೋಮು ಸೌಹಾರ್ದತೆ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಸಾಧ್ಯತೆಯಿತ್ತು. ಕೆಲ ವೀಡಿಯೋಗಳು ಸುಳ್ಳು ಹೇಳಿಕೆಗಳನ್ನು ನೀಡಿವೆ ಹಾಗೂ ಸರಕಾರ ಕೆಲ ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಕಸಿದಿವೆ ಹಾಗೂ ನಾಗರಿಕ ಯುದ್ಧವನ್ನು ಘೋಷಿಸಿವೆ ಎಂದು ಹೇಳಿದೆ ಎಂದು ಸಚಿವಾಲಯ ಹೇಳಿದೆ.
ಗುಪ್ತಚರ ಮಾಹಿತಿಯಡಿ ಹಾಗೂ ಹೊಸ ಐಟಿ ನಿಯಮಗಳ ಅನ್ವಯ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕುರ್ ಹೇಳಿದ್ದಾರೆ.
ಕಳೆದ ವರ್ಷದಿಂದೀಚೆಗೆ ಸರಕಾರವು 78 ಸುದ್ದಿ ಚಾನೆಲ್‌ಗಳು ಹಾಗೂ 560 ಯುಆರ್‌ಎಲ್‌ಗಳನ್ನು ಯುಟ್ಯೂಬ್‌ನಲ್ಲಿ ನಿಷೇಧಿಸಿದೆ.







