ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ
ಬಾಗಲಕೋಟೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಮುಧೋಳದಲ್ಲಿರುವ ಸಚಿವ ಮುರುಗೇಶ್ ನಿರಾಣಿ ಅವರ ಮನೆಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಜನ್ಮ ದಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಮುಧೋಳ ಪಟ್ಟಣದ ವಿರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆಗೆ ಆಗಮಿಸುವುದಕ್ಕೂ ಮುಂಚೆ ಸಚಿವ ನಿರಾಣಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರನ್ನು ನಿರಾಣಿ ಸಹೋದರ ಸಂಗಮೇಶ ನಿರಾಣಿ ಅವರು ಬರಮಾಡಿಕೊಂಡರು.
ಜಮಖಂಡಿಯಿಂದ ಮುಧೋಳಕ್ಕೆ ಆಗಮಿಸಿದ ಅವರು, ಸಚಿವ ನಿರಾಣಿ ಮನೆ ಸಮೀಪದಲ್ಲಿರುವ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ಮೂಲಕ ಬಂದಿಳಿದಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ಸಂಗಮೇಶ ನಿರಾಣಿ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದು, 2018ರಲ್ಲಿ ಬಿಜೆಪಿ ಟಿಕೆಟ್ ಸಿಗದೇ ಜಮಖಂಡಿಯಿಂದ ಪಕ್ಷೇತರನಾಗಿ ಸ್ಫರ್ಧಿಸಿ ಪರಾಭವಗೊಂಡಿದ್ದರು. ಸದ್ಯ ಸಂಗಮೇಶ ನಿರಾಣಿ ಅವರು, ಕಾಂಗ್ರೆಸ್ ಸೇರಿ ವಿಧಾನಸಭೆ ಚುನಾವಣೆಗೆ ತೇರದಾಳ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂಬ ಮಾತುಗಳೂ ಕೇಳಿ ಬರುತ್ತಿವೆ.