ಸುರತ್ಕಲ್: ಭಾರ್ಗವಿ ಫೈನಾನ್ಸ್ ಹೆಸರಿನಲ್ಲಿ ವಂಚನೆ; ಫೈನಾನ್ಸ್ ಮಾಲಕ ಅಶೋಕ್ ಭಟ್, ಪತ್ನಿ ವಿದ್ಯಾ ಭಟ್ ವಿರುದ್ಧ ದೂರು

ಸಂತ್ರಸ್ತರಿಂದ ಸುದ್ದಿಗೋಷ್ಠಿ
ಸುರತ್ಕಲ್, ಸೆ.27: ಸುರತ್ಕಲ್ ಪರಿಸರದಲ್ಲಿ ಭಾರ್ಗವಿ ಫೈನಾನ್ಸ್ ನ ಹೆಸರಿನಲ್ಲಿ ಚಿಟ್ ಫಂಡ್ ಮಾಡಿ ಕೋಟ್ಯಂತರ ರೂ. ಹಣವನ್ನು ಫೈನಾಲ್ಸ್ ಮಾಲಕ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾಭಟ್ ವಂಚಿಸಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.
ಸುರತ್ಕಲ್ ನ ಖಾಸಗಿ ಹೊಟೇಲ್ ವೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂತ್ರಸ್ತರಾದ ದೀಪಕ್ ಕುಮಾರ್ ಶೆಟ್ಟಿ, ನಾನು 15 ವರ್ಷಗಳಿಂದ ಸುರತ್ಕಲ್ ನ ಅಶೋಕ್ ಭಟ್ ಮತ್ತು ವಿದ್ಯಾ ಭಟ್ ಮಾಲಕತ್ವದ ಭಾರ್ಗವಿ ಫೈನಾನ್ಸ್ ನಲ್ಲಿ ವ್ಯವಹಾರ ಮಾಡಿಕೊಂಡಿದ್ದೇನೆ. 10 ಲಕ್ಷ ರೂಪಾಯಿ ಮೌಲ್ಯದ ಚಿಟ್ಪಂಡಿಗೆ ಸೇರಿದ್ದು ಪ್ರತಿದಿನ 1,500 ರೂ.ಯಂತೆ ತಿಂಗಳಿಗೆ 50,000 ಕಟ್ಟುತ್ತಾ ಬಂದಿರುತ್ತೇನೆ. ಕಳೆದ ಮಾರ್ಚ್ ನಲ್ಲಿ ಚಿಟ್ ಫಂಡ್ ಮುಕ್ತಾಯಗೊಂಡಿದ್ದರೂ, ಇಲ್ಲಿಯ ವರೆಗೂ ನನಗೆ ಹಣ ನೀಡಿಲ್ಲ, ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದರು.
ಬಳಿಕ ಮಾತನಾಡಿದ ಮತ್ತೋರ್ವ ಸಂತ್ರಸ್ತ ಅಜಿತ್ ಕುಮಾರ್, ಅಶೋಕ್ ಭಟ್ ಮತ್ತು ವಿದ್ಯಾ ಭಟ್ ಜನರಿಗೆ ವಂಚಿಸುವ ಸಲುವಾಗಿಯೇ ಚಿಟ್ ಫಂಡ್ ಮಾಡಿದ್ದರು. ಹೀಗಾಗಿ ಚಿಟ್ ಫಂಡ್ ನ ಮಧ್ಯದಲ್ಲಿ ಹಣ ಕೇಳಿದರೆ, ಕೊನೆಯಲ್ಲಿ ನೀಡುವುದಾಗಿ ವಂಚಿಸುತ್ತಿದ್ದ. ಅಲ್ಲದೆ, ಚೆಕ್ ಮತ್ತು ಆನ್ ಲೈನ್ ಗಳ ಮೂಲಕ ಚಿಟ್ ಫಂಡ್ ನ ಹಣ ಪಡೆಯಲು ನಿರಾಕರಿಸುತ್ತಿದ್ದ ಈತ ಕ್ಯಾಶ್ ರೂಪದಲ್ಲೇ ನೀಡುವಂತೆ ಹೇಳಿ ಪಡೆದುಕೊಳ್ಳುತ್ತಿದ್ದ ಎಂದು ದೂರಿದರು.
ನಮ್ಮ ಗಮನಕ್ಕೆ ಬಂದಿರುವಂತೆ ಎರಡು ಕೋಟಿ ರೂ. ಗೂ ಹೆಚ್ಚಿನ ಹಣವನ್ನು ಚಿಟ್ ಫಂಡ್ ಮೂಲಕ ಸಂಗ್ರಹಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತರು ಚಿಟ್ ಫಂಡ್ ನ ಹಣ ಕೇಳಲು ಅವರ ಮನೆಗೆ ಹೋದರೆ ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾ ಭಟ್ ಕೊಲೆ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತಿ ಸಲ ಹಣ ಕೇಳಿದರೆ ಒಬ್ಬರು ಒಬ್ಬರ ಹೆಸರು ಹೇಳಿ ಅವರು ವಂಚಿಸಿದ್ದಾರೆ ಎಂದು ಹೇಳಿತ್ತಿದ್ದ. ಅಲ್ಲದೇ, ಪಿಗ್ಮಿ ಮತ್ತು ಫಂಡ್ ನ ಹಣ ಸಂಗ್ರಹಿಸುತ್ತಿದ್ದ ಶಿಬರೂರು ಮೂಲದ ಯಕ್ಷಿತ್ ಹಣ ವಂಚಿಸಿದ್ದಾನೆ ಎಂದು ಎಲ್ಲರನ್ನು ಮೋಸ ಮಾಡುತ್ತಿದ್ದ ಎಂದು ಸಂತ್ರಸ್ತರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಪಿಗ್ಮಿ ಕಲೆಕ್ಟರ್ ಯಕ್ಷಿತ್ ಮಾತನಾಡಿ, ನಾನು ಒಂದೂವರೆ ವರ್ಷಗಳಿಂದ ಫೈನಾನ್ಸ್ ನಲ್ಲಿ ಹಣ ಸಂಗ್ರಹಕನಾಗಿ ದುಡಿಯುತ್ತಿದ್ದೇನೆ. ನಾನು ಹಲವರನ್ನು ಸಂಪರ್ಕಿಸಿ ಪಿಗ್ಮಿ ಮತ್ತು ಚಿಟ್ ಫಂಡ್ಗರ ಸೇರಿಸಿದ್ದೇನೆ. ಫೈನಾನ್ಸ್ 8 ತಿಂಗಳಿಂದ ಮುಚ್ಚಿದ್ದು, ಅದರ ಗ್ರಾಹಕರು ಹಣ ಕೇಳುತ್ತಿದ್ದಾರೆ. ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೇನೆ. ನನಗೆ 4 ತಿಂಗಳಿಂದ ಸಂಬಳ ನೀಡಿಲ್ಲ. ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
"ಹಲವು ಕೊಲೆ ಮಾಡಿದ್ದೇನೆ, ಇನ್ನೂ ಮಾಡಲು ಹೆದರಲ್ಲ"
ಈತನ ವಂಚನೆಯ ಕುರಿತು ಕಮಿಷನರ್ ಬಳಿ ತೆರಳಿದ್ದ ಸಂತ್ರಸ್ತರಿಗೆ ಜೀವ ಬೆದರಿಕೆ ಹಾಕಿರುವ ಅಶೋಕ್ ಭಟ್, ಹಣವನ್ನು ಕಮಿಷನರ್ ಅವರಿಂದಲೇ ಪಡೆದುಕೊಳ್ಳಿ ಎಂದು ದರ್ಪ ಪ್ರದರ್ಶಿಸುತ್ತಾನೆ. ನಾನು ಈಗಾಗಲೇ ಹಲವು ಕೊಲೆ ಮಾಡಿದ್ದೇನೆ, ಇನ್ನೂ ಕೊಲೆ ಮಾಡಲು ಹಿಂಜರಿಯಲ್ಲ ಎಂದು ಬೆದರಿಕೆ ಹಾಕುತ್ತಾನೆ ಎಂದು ಸಂತ್ರಸ್ತರು ದೂರಿದ್ದಾರೆ.
ಆರೋಪಿ ಅಶೋಕ್ ಭಟ್ ಗಡಿಪಾರಾಗಿದ್ದ ರೌಡಿ ಶೀಟರ್: ಆರೋಪಿ ಅಶೋಕ್ ಭಟ್, ಹಲವು ವರ್ಷಗಳ ಕಾಲ ಸಂಘಪರಿವಾರದ ಬಜರಂಗದಳ, ವಿಶ್ವಹಿಂದೂ ಪರಿಷತ್ ಗಳಲ್ಲಿ ಗುರುತಿಸಿಕೊಂಡಿದ್ದ. ಆ ಸಂದರ್ಭದಲ್ಲಿ ಆತನ ವಿರುದ್ಧ ಸುಮಾರು 20ಕ್ಕೂ ಹೆಚ್ವಿನ ಪ್ರಕರಣಗಳು ದಾಖಲಾಗಿತ್ತು. ಕೋಮು ರೌಡಿ ಎಂದು ಹಣೆ ಪಟ್ಟಿ ಪಡೆದಿದ್ದ ಈತ ಗಡಿಪಾರು ಆಗಿದ್ದ. ಬಳಿಕ ಮಂಗಳೂರು ಉತ್ತರ ಕ್ಷೇತ್ರದಲ್ಲಿ ವಿಜಯ ಕುಮಾರ್ ಶಾಸಕರಾಗಿ ಬಂದ ಬಳಿಕ ಕಾಂಗ್ರೆಸ್ ಸೇರಿಕೊಂಡಿದ್ದ. ಆಗ ಈತನ ಮೇಲೆದ್ದ ರೌಡಿ ಶಿಟ್ ತೆರವುಗೊಳಿಸಿ ಈತನ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು ಎಂದು ತಿಳಿದುಬಂದಿದೆ.
ನಾನು ಮನೆಯಲ್ಲಿದ್ದ ಚಿನ್ನಾಭರಣ ಅಡವಿಟ್ಟು ಅಶೋಕ್ ಭಟ್ ಫೈನಾನ್ಸ್ ಮಾಡಲು ಹಣ ನೀಡಿದ್ದೆ. ಬಳಿಕ ಚಿಟ್ ಫಂಡ್ ಗೂ ಸೇರಿದ್ದು ಈಗಾಗಲೇ ಚಿಟ್ ಫಂಡ್ ಕಟ್ಟಿ ಮುಗಿಸಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಮಗಳ ಮದುವೆಗಾಗಿ ಈ ಹಣವನ್ನು ಆತನ ಮೇಲೆ ಭರವಸೆ ಇಟ್ಟು ನೀಡಿದ್ದೆ. ನಾನು ನೀಡಿದ ಹಣಕ್ಕೆ ಒಪ್ಪಂದ ಪತ್ರ ಮಾಡಿಸಿದ್ದೇನೆ. ಚೆಕ್ ನೀಡುವುದಾಗಿ ಹೇಳಿ ಅದನ್ನು ನೀಡಿಲ್ಲ. ಒಟ್ಟು ಅಶೋಕ್ ಭಟ್ ಮತ್ತು ಆತನ ಪತ್ನಿ ವಿದ್ಯಾಭಟ್ 7 ಲಕ್ಷ ರೂ. ವಂಚಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಗುಣವತಿ ಕಣ್ಣೀರು ಹಾಕಿದರು.
"ನಾನು ಸಿಯಾಳ ಮಾರಿ ಜೀವನ ಸಾಗಿಸುತ್ತಿರುವವ. ದಿನಕ್ಕೆ 200ರೂ. ಯಂತೆ ಫೈನಾನ್ಸ್ ನ ಪಿಗ್ಮಿಗೆ ಕಟ್ಟುತ್ತಿದ್ದೆ. ನಾನು ಕಟ್ಟಿರುವ 80 ಸಾವಿರ ರೂ. ಪೈಕಿ ಕಾಡಿಬೇಡಿ ಕೈಕಾಲು ಹಿಡಿದ ಕಾರಣ 20 ಸಾವಿರ ರೂ. ಹಿಂದಿರುಗಿಸಿದ್ದಾನೆ. ಇನ್ನೂ 60 ಸಾವಿರ ರೂ. ನೀಡದೇ ವಂಚಿಸಿದ್ದಾನೆ".
-ಗೊಪಾಲ, ಹಣ ಕಳೆದುಕೊಂಡ ಸಂತ್ರಸ್ತ