ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರನ ಅಗತ್ಯವಿದೆ ಎಂದ ಅಫ್ರಿದಿ

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹಾರ್ದಿಕ್ ಪಾಂಡ್ಯ (Hardik Pandya) ಅವರಂತಹ ಮ್ಯಾಚ್ ವಿನ್ನಿಂಗ್ ಫಿನಿಶರ್ ಅಗತ್ಯವಿದೆ ಎಂದು ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿ (Shahid Afridi) ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಬ್ಯಾಟಿಂಗ್ ಕ್ರಮಾಂಕದ ಕೆಳ ಸರದಿಯಲ್ಲಿ ಯಾವುದೇ ಮ್ಯಾಚ್ ವಿನ್ನರ್‌ಗಳನ್ನು ನೋಡಬಹುದೇ ಎಂದು ಸುದ್ದಿ ನಿರೂಪಕರೊಬ್ಬರು ಕೇಳಿದಾಗ, ತಂಡದಲ್ಲಿ ಅಂತಹ ಆಟಗಾರನ ಕೊರತೆಯಿದೆ ಎಂದು ಆಫ್ರಿದಿ ಒಪ್ಪಿಕೊಂಡರು.
ಪಾಕಿಸ್ತಾನಕ್ಕಾಗಿ ಆಸಿಫ್ ಅಲಿ ಅಥವಾ ಖುಶ್ದಿಲ್ ಶಾ ಅವರಂತಹ ಆಟಗಾರರು ಆ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಜನರು ನಿರೀಕ್ಷಿಸುತ್ತಿದ್ದರು. ಆದರೆ ಅವರಿಬ್ಬರೂ ಅಸ್ಥಿರ ಪ್ರದರ್ಶನಗಳೊಂದಿಗೆ ನಿರಾಸೆಗೊಳಿಸಿದ್ದಾರೆ ಎಂದು ಆಫ್ರಿದಿ ಹೇಳಿದರು. ಮುಹಮ್ಮದ್ ನವಾಝ್ ಹಾಗೂ ಶಾದಾಬ್ ಖಾನ್ ಕೂಡ ಸ್ಥಿರತೆಯ ಕೊರತೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
"ನಮಗೆ ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರನ ಅಗತ್ಯವಿದೆ. ಯಾರೋ ಒಬ್ಬರು ವಿಶ್ವಾಸಾರ್ಹರು, ಕೆಳ ಕ್ರಮಾಂಕಕ್ಕೆ ಬರುತ್ತಾರೆ, ಬೌಲಿಂಗ್‌ನಲ್ಲಿ ಸಹಾಯ ಮಾಡುತ್ತಾರೆ ಹಾಗೂ ಪಂದ್ಯವನ್ನು ಮುಗಿಸಲು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ನಮ್ಮ ತಂಡದಲ್ಲೂ ಯಾವುದೇ ಮ್ಯಾಚ್ ಫಿನಿಷರ್ ಅನ್ನು ಕೆಳ ಕ್ರಮಾಂಕದಲ್ಲಿ ಹೊಂದಿದ್ದೇವೆ ಎಂದು ನೀವು ಭಾವಿಸುತ್ತೀರಾ?" ಎಂದು ಸಮಾ ಟಿವಿ ಆ್ಯಂಕರ್ ಅಫ್ರಿದಿಗೆ ಪ್ರಶ್ನಿಸಿದ್ದಾರೆ.
"ನೀವು ಹೇಳಿದ್ದು ಸರಿ. ನಮ್ಮಲ್ಲಿ ಹಾರ್ದಿಕ್ ಪಾಂಡ್ಯರಂತಹ ಫಿನಿಶರ್ ಇಲ್ಲ. ಆಸಿಫ್ ಅಲಿ ಅಥವಾ ಖುಶ್ದಿಲ್ ಶಾ ಆ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ. ಮುಹಮ್ಮದ್ ನವಾಝ್ ಹಾಗೂ ಶಾದಾಬ್ ಖಾನ್ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ" ಎಂದು ಅಫ್ರಿದಿ ಹೇಳಿದರು.