ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿಗೆ ಫಿಫಾದಿಂದ ಗೌರವ
ಛೆಟ್ರಿ ಸಾಧನೆ ಗುರುತಿಸಿ ಮೂರು ಭಾಗವಿರುವ ‘ಕ್ಯಾಪ್ಟನ್ ಫೆಂಟಾಸ್ಟಿಕ್’ ಸರಣಿ ಬಿಡುಗಡೆ ಮಾಡಿದ ಫಿಫಾ

Photo: Twitter/@FIFAWorldCup
ಹೊಸದಿಲ್ಲಿ, ಸೆ.28: ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಅವರ ಸಾಧನೆ ಹಾಗೂ ಗೋಲ್ ಗಳಿಸುವ ಚತುರತೆಯನ್ನು ಗುರುತಿಸಿ ಅವರ ಜೀವನ ಹಾಗೂ ವೃತ್ತಿಜೀವನದ ಮೂರು ಭಾಗಗಳುಳ್ಳ ‘ಕ್ಯಾಪ್ಟನ್ ಫೆಂಟಾಸ್ಟಿಕ್’ ಹೆಸರಿನ ಸರಣಿಯನ್ನು ಬಿಡುಗಡೆ ಮಾಡಿದೆ.
ಸರಣಿಯ ಮೂರು ಭಾಗಗಳು ತನ್ನ ಪ್ರಸಾರ ಘಟಕ ಫಿಫಾ+ನಲ್ಲಿ ಲಭ್ಯವಿದೆ ಎಂದು ಫಿಫಾ ಘೋಷಿಸಿದೆ.
‘‘ರೊನಾಲ್ಡೊ ಹಾಗೂ ಮೆಸ್ಸಿ ಬಗ್ಗೆ ನಿಮಗೆ ತಿಳಿದಿದೆ. ಈಗ ಮೂರನೇ ಅತ್ಯಂತ ಹೆಚ್ಚು ಗೋಲು ಗಳಿಸಿದ ಸಕ್ರಿಯ ಅಂತರ್ರಾಷ್ಟ್ರೀಯ ಫುಟ್ಬಾಲ್ ಆಟಗಾರನ ಕಥೆಯನ್ನು ನೋಡಿ. ‘ಸುನೀಲ್ ಛೆಟ್ರಿ-ಕ್ಯಾಪ್ಟನ್ ಫೆಂಟಾಸ್ಟಿಕ್’ ಈಗ ಫಿಫಾ+ನಲ್ಲಿ ಲಭ್ಯವಿದೆ ಎಂದು ಫಿಫಾ ತನ್ನ ವಿಶ್ವಕಪ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದೆ.
ಕ್ರಿಸ್ಟಿಯಾನೊ ರೊನಾಲ್ಡೊ (117 ಗೋಲು) ಹಾಗೂ ಲಿಯೊನೆಲ್ ಮೆಸ್ಸಿ (90 ಗೋಲು) ನಂತರ 84 ಗೋಲುಗಳೊಂದಿಗೆ ಅತ್ಯಂತ ಹೆಚ್ಚುಅಂತರ್ರಾಷ್ಟ್ರೀಯ ಗೋಲುಗಳನ್ನು ಗಳಿಸಿದ ಸಕ್ರಿಯ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ 38 ವರ್ಷದ ಛೆಟ್ರಿ ಮೂರನೇ ಸ್ಥಾನದಲ್ಲಿದ್ದಾರೆ.
ಮೊದಲ ಭಾಗ ಅವರು 20ನೇ ವಯಸ್ಸಿನಲ್ಲಿ ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ ದಿನವನ್ನು ನೆನಪಿಸುತ್ತದೆ. ನಿಕಟ ಸಹವರ್ತಿಗಳು, ಪ್ರೀತಿಪಾತ್ರರು ಹಾಗೂ ಫುಟ್ಬಾಲ್ ಸಹೋದ್ಯೋಗಿಗಳು ಛೆಟ್ರಿ ಕಥೆಯನ್ನು ಹೇಳುತ್ತಾರೆ. ಎರಡನೇ ಭಾಗದಲ್ಲಿ ಛೆಟ್ರಿ ರಾಷ್ಟ್ರೀಯ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿರುವ ಕುರಿತಾಗಿದೆ. ಉನ್ನತ ದರ್ಜೆಯ ಸಾಗರೋತ್ತರ ಕ್ಲಬ್ಗಾಗಿ ವೃತ್ತಿಪರ ಫುಟ್ಬಾಲ್ ಆಡುವ ಅವರ ದೊಡ್ಡ ಕನಸು ಇದರಲ್ಲಿದೆ.
ಮೂರನೇ ಭಾಗದಲ್ಲಿ ಛೆಟ್ರಿ ತಮ್ಮ ವೃತ್ತಿಪರ ವೃತ್ತಿಜೀವನ ಹಾಗೂ ಅವರ ವೈಯಕ್ತಿಕ ಜೀವನದ ಉತ್ತುಂಗವನ್ನು ತಲುಪಿರುವ ವಿಚಾರವಿದೆ. ಅವರು ಗೆದ್ದಿರುವ ಟ್ರೋಫಿಗಳು ಹಾಗೂ ಅವರು ಪುಡಿಗಟ್ಟಿದ ದಾಖಲೆಗಳ ವಿವರ ಇದರಲ್ಲಿದೆ.
ಛೆಟ್ರಿ 2005ರಲ್ಲಿ ಭಾರತದ ಪರ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ. ಆ ನಂತರ ಅವರು ಮಂಗಳವಾರ ವಿಯೆಟ್ನಾಂ ವಿರುದ್ಧ ಆಡಿರುವ ಪಂದ್ಯವೂ ಸೇರಿದಂತೆ ಒಟ್ಟು 131 ಪಂದ್ಯಗಳನ್ನು ಆಡಿದ್ದಾರೆ.
ಭಾರತದ ಪರ ಅತ್ಯಂತ ಹೆಚ್ಚು ಪಂದ್ಯಗಳನ್ನಾಡಿದ ಫುಟ್ಬಾಲ್ ಆಟಗಾರನಾಗಿರುವ ಚೆಟ್ರಿ ಪ್ರಮುಖ ಗೋಲ್ಸ್ಕೋರರ್ ಆಗಿದ್ದಾರೆ. 2007, 2009 ಹಾಗೂ 2012ರಲ್ಲಿ ನಡೆದ ನೆಹರೂ ಕಪ್ ಟ್ರೋಫಿಗಳು ಹಾಗೂ 2011, 2015 ಹಾಗೂ 2021ರ ದಕ್ಷಿಣ ಏಶ್ಯ ಫುಟ್ಬಾಲ್ ಫೆಡರೇಶನ್(ಸ್ಯಾಫ್)ಚಾಂಪಿಯನ್ಶಿಪ್ನಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ಛೆಟ್ರಿ ನೆರವಾಗಿದ್ದರು.
ಈ ಸ್ಟಾರ್ ಫುಟ್ಬಾಲ್ ಆಟಗಾರನಿಗೆ 7 ಬಾರಿ ಎಐಎಫ್ಎಫ್ ವರ್ಷದ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2021ರಲ್ಲಿ ದೇಶದ ಉನ್ನತ ಕ್ರೀಡಾ ಗೌರವ 'ಖೇಲ್ರತ್ನ' ಪ್ರಶಸ್ತಿಯನ್ನು ಛೆಟ್ರಿ ಸ್ವೀಕರಿಸಿದ್ದರು.
You know all about Ronaldo and Messi, now get the definitive story of the third highest scoring active men's international.
— FIFA World Cup (@FIFAWorldCup) September 27, 2022
Sunil Chhetri | Captain Fantastic is available on FIFA+ now