ಮೊದಲ ಟ್ವೆಂಟಿ-20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸುಲಭ ಜಯ
ರಾಹುಲ್, ಸೂರ್ಯಕುಮಾರ್ ಅರ್ಧಶತಕ, ಅರ್ಷದೀಪ್ ಸಿಂಗ್‌ಗೆ 3 ವಿಕೆಟ್

ತಿರುವನಂತಪುರ, ಸೆ.28: ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್ ಹಾಗೂ ಮಧ್ಯಮ ಕ್ರಮಾಂಕದ ಸೂರ್ಯಕುಮಾರ್ ಕುಮಾರ್ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಸುಲಭ ಜಯ ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 107 ರನ್ ಸುಲಭ ಗುರಿ ಪಡೆದ ಭಾರತವು 16.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು. ರಾಹುಲ್ (ಔಟಾಗದೆ 51ರನ್, 56 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಸೂರ್ಯಕುಮಾರ್ (ಔಟಾಗದೆ 50, 33 ಎಸೆತ, 5 ಬೌಂಡರಿ,3 ಸಿಕ್ಸರ್)ಮೂರನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 93 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತವು ರೋಹಿತ್ ಶರ್ಮಾ(0) ಹಾಗೂ ವಿರಾಟ್ ಕೊಹ್ಲಿ (3 ರನ್) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಈ ಇಬ್ಬರು ಔಟಾದಾಗ ಭಾರತದ ಸ್ಕೋರ್ 17ಕ್ಕೆ 2.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಭಾರತದ ಬೌಲರ್‌ಗಳಾದ ಅರ್ಷದೀಪ್ ಸಿಂಗ್(3-32), ದೀಪಕ್ ಚಹಾರ್(2-24)ಹಾಗೂ ಹರ್ಷಲ್ ಪಟೇಲ್(2-26) ಅವರ ಶಿಸ್ತುಬದ್ಧ್ದ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 106 ರನ್ ಗಳಿಸಲಷ್ಟೇ ಶಕ್ತವಾಯಿತು.
2.3ನೇ ಓವರ್‌ನಲ್ಲಿ 9 ರನ್ ಗಳಿಸುವಷ್ಟರಲ್ಲಿ ದಕ್ಷಿಣ ಆಫ್ರಿಕಾವು ಅಗ್ರ ಕ್ರಮಾಂಕದ ಐವರು ಬ್ಯಾಟರ್‌ಗಳನ್ನು ಕಳೆದುಕೊಂಡು ಅತ್ಯಂತ ಕಳಪೆ ಆರಂಭ ಪಡೆಯಿತು. ನಾಯಕ ಟೆಂಬಾ ಬವುಮಾ(0), ಕ್ವಿಂಟನ್ ಡಿಕಾಕ್(1), ರೊಸ್ಸೌ(0), ಡೇವಿಡ್ ಮಿಲ್ಲರ್(0) ಹಾಗೂ ಟ್ರಿಸ್ಟನ್ ಸ್ಟಬ್ಸ್(0) ಅವರು ಅರ್ಷದೀಪ್ ಹಾಗೂ ದೀಪಕ್ ಚಹಾರ್ ದಾಳಿಗೆ ಕಂಗಾಲಾಗಿ ವಿಕೆಟ್ ಕೈಚೆಲ್ಲಿದರು.
ಚಹಾರ್ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ನಾಯಕ ಬವುಮಾ ವಿಕೆಟ್ ಪಡೆದರು. 2ನೇ ಓವರ್‌ನಲ್ಲಿ ಅರ್ಷದೀಪ್ ಅವರು ಕ್ವಿಂಟನ್ ಡಿಕಾಕ್, ರಿಲೀ ರೊಸ್ಸೌ ಹಾಗೂ ಡೇವಿಡ್ ಮಿಲ್ಲರ್‌ರನ್ನು ಔಟ್ ಮಾಡಿ ಆಫ್ರಿಕಾದ ಸಂಕಷ್ಟ ಹೆಚ್ಚಿಸಿದರು.
ಆಗ ವೇಯ್ನ ಪಾರ್ನೆಲ್(24 ರನ್, 37 ಎಸೆತ)ಹಾಗೂ ಮರ್ಕ್ರಮ್(25 ರನ್, 24 ಎಸೆತ)6ನೇ ವಿಕೆಟಿಗೆ 33 ರನ್ ಸೇರಿಸಿ ತಂಡವನ್ನು ಭಾರೀ ಕುಸಿತದಿಂದ ಮೇಲೆತ್ತಿದರು. ಈ ಇಬ್ಬರು ಔಟಾದ ಬಳಿಕ ಅಗ್ರ ಸ್ಕೋರರ್ ಕೇಶವ ಮಹಾರಾಜ್(41 ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್)ಬಾಲಂಗೋಚಿ ಕಾಗಿಸೊ ರಬಾಡ(ಔಟಾಗದೆ 7)ಅವರೊಂದಿಗೆ 8ನೇ ವಿಕೆಟಿಗೆ 33 ರನ್ ಸೇರಿಸಿ ದಕ್ಷಿಣ ಆಫ್ರಿಕಾದ ಸ್ಕೋರನ್ನು 100ರ ಗಡಿ ದಾಟಿಸಿದರು. 4 ಓವರ್ ಬೌಲಿಂಗ್ ಮಾಡಿದ್ದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಕೇವಲ 8 ರನ್ ನೀಡಿ ಗಮನ ಸೆಳೆದರು. ಆಲ್‌ರೌಂಡರ್ ಅಕ್ಷರ್ ಪಟೇಲ್ 16 ರನ್‌ಗೆ 1 ವಿಕೆಟ್ ಪಡೆದರು.