ಅ.1ರಂದು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ, ಸ್ವಚ್ಛತೆ ಕಾರ್ಯಕ್ರಮ
ಪ್ಲಾಸ್ಟಿಕ್ ಕೊಟ್ಟು ಅಕ್ಕಿ ಪಡೆಯುವ ಅವಕಾಶ

ಮಂಗಳೂರು, ಸೆ.29: ದ.ಕ.ಜಿಲ್ಲಾಡಳಿತ, ದ.ಕ.ಜಿಪಂ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ ಹಾಗೂ ಪಿಲಾತಬೆಟ್ಟು ಗ್ರಾಪಂ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ ಮತ್ತು ಸ್ವಚ್ಛತಾ ಕಾರ್ಯಕ್ರಮವು ಅ.1ರಂದು ಬೆಳಗ್ಗೆ 10ಕ್ಕೆ ಪೂಂಜಾಲಕಟ್ಟೆಯ ಸುವಿಧ ಸಹಕಾರಿ ಭವನದಲ್ಲಿ ನಡೆಯಲಿದೆ.
ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಸುಡುವುದರಿಂದ ಹೊರ ಬರುವ ವಾಯು ಮಾಲಿನ್ಯ, ಇದರಿಂದ ಉಂಟಾಗುವ ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ದೂರವಿರಲು ಪ್ಲಾಸ್ಟಿಕ್ ಬಳಕೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಮತ್ತು ಪರಿಸರ ಮಾಲಿನ್ಯ ತಡೆಯಲು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯ ತಂದು ಅಕ್ಕಿ ಪಡೆಯಿರಿ
ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಗೆ ವಿಶೇಷ ಕೊಡುಗೆ ಇದ್ದು, ಅರ್ಧ ಕಿಲೊ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ತರುವವರಿಗೆ 5 ಕಿಲೊ ಕುಚ್ಚಲು ಅಕ್ಕಿ ಮತ್ತು 1 ಕಿಲೊ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ತರುವವರಿಗೆ 10 ಕಿಲೊ ಕುಚ್ಚಲು ಅಕ್ಕಿ ನೀಡಲಾಗುವುದು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







