ಗುರುಪುರ: ಪ್ರಥಮ ಹಂತದ ಗ್ರಾಮಸಭೆ

ಮಂಗಳೂರು, ಸೆ.29: ಗುರುಪುರ ಗ್ರಾಪಂನ 2022-23ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿಯ ಅಧ್ಯಕ್ಷತೆಯಲ್ಲಿ ಗುರುವಾರ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡಿರುವ ತನಗೆ ನಿವೇಶನ ನೀಡುವಲ್ಲಿ ವಿಳಂಬವಾಗಿರುವ ಬಗ್ಗೆ ಸಂತ್ರಸ್ತ ಮೋನು ಯಾನೆ ಮುಹಮ್ಮದ್ ಪ್ರಶ್ನಿಸಿದರು. ಇದಕ್ಕೆ ಗ್ರಾಮಕರಣಿಕ ಮುತ್ತಪ್ಪಉತ್ತರಿಸುತ್ತ, ಎರಡೂವರೆ ವರ್ಷಗಳ ಹಿಂದೆ ಗುಡ್ಡೆ ಕುಸಿದು ಮನೆ ಕಳೆದುಕೊಂಡ ಮೂಳೂರು ಸೈಟ್ ಸರ್ವೆ ನಂಬ್ರ 133ರ 9 ಅಥವಾ 10 ಕುಟುಂಬಗಳಿಗೆ ಮನೆ ನಿರ್ಮಿಸಲು ಮೂಳೂರು ಗ್ರಾಮದ ಸರ್ವೆ ನಂಬ್ರ 102ರಲ್ಲಿ 44 ಸೆಂಟ್ಸ್ ಜಾಗ ಮಂಜೂರಾಗಿದ್ದು, ಕಂದಾಯ ಇಲಾಖೆ ಈಗಾಗಲೇ ಪಂಚಾಯತ್‌ಗೆ ಜಾಗ ಹಸ್ತಾಂತರಿಸಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್) ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ದಿವಾಕರ್ ಮಾತನಾಡಿ, ಎನ್‌ಎಚ್ 169ರ ವಿಸ್ತರಣೆ ಕಾಮಗಾರಿಗೆ ಭೂಸ್ವಾಧೀನ ನಡೆಯುತ್ತಿದ್ದು, ಪದವು ಹೊರತುಪಡಿಸಿ ಉಳಿದ ಪ್ರದೇಶಗಳ ಭೂ ಮಾಲಕರಿಗೆ ನೋಟಿಸು ಜಾರಿಗೊಳಿಸಲಾಗುತ್ತಿದೆ ಮತ್ತು ಪರಿಹಾರ ಮೊತ್ತ ನೀಡುವ ಕೆಲಸ ಮುಂದುವರಿದಿದೆ ಎಂದರು.
ಅಡ್ಡೂರು ಗ್ರಾಮದಲ್ಲಿ ಸ್ಮಶಾನಕ್ಕೆ ಗುರುತಿಸಲಾಗಿರುವ ಜಾಗದಲ್ಲಿ ಜೆಜೆಎಂ ಯೋಜನೆಯಡಿ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ಕಾಮಗಾರಿ ಕಳಪೆಯಾಗಿದೆ. ಜೊತೆಗೆ ಹಳ್ಳಿಯೊಳಗೆ ನಿರ್ಮಿಸಲಾದ ರಸ್ತೆ ಕಾಮಗಾರಿಗಳಿಗೆ ಎಲ್ಲೂ ದಾನಪತ್ರ ಮಾಡಿಲ್ಲ. ಇಂತಹ ರಸ್ತೆಗಳಿಂದ ಭವಿಷ್ಯದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಲಿದೆ ಎಂದು ಸ್ಥಳೀಯರೊಬ್ಬರು ಸಭೆಯ ಗಮನಸೆಳೆದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಬೂಬಕ್ಕರ್ ಸ್ವಾಗತಿಸಿದರು. ಸಿಬ್ಬಂದಿ ಇರ್ಶಾದ್ ವಾರ್ಡ್ ಸಭೆಯ ವರದಿ ವಾಚಿಸಿದರು. ಉಪಾಧ್ಯಕ್ಷೆ ದಿಲ್‌ಶಾದ್, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್‌ರಾಜ್, ಗ್ರಾಪಂ ಕಾರ್ಯದರ್ಶಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.