ನೀತಿ ಸಂಹಿತೆ ಉಲ್ಲಂಘನೆ ಆರೋಪ: ಶಾಸಕ ರಿಝ್ವಾನ್ ಅರ್ಶದ್ ವಿರುದ್ಧದ ಪ್ರಕರಣ ಬದಿಗೆ ಸರಿಸಿದ ಹೈಕೋರ್ಟ್
ಬೆಂಗಳೂರು, ಸೆ.29: ಬೆಂಗಳೂರು ಕೇಂದ್ರ(ಸೆಂಟ್ರಲ್)ಲೋಕಸಭಾ ಕ್ಷೇತ್ರಕ್ಕೆ 2019ರಲ್ಲಿ ನಡೆದ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಿಝ್ವಾನ್ ಅರ್ಶದ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ಬದಿಗೆ ಸರಿಸಿದೆ. ಈ ಆರೋಪದ ಕುರಿತು ಲಘು ಧೋರಣೆಯಿಂದ ತನಿಖೆ ಮಾಡಲಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತಂತೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಬಾಕಿ ಇರುವ ತಮ್ಮ ವಿರುದ್ಧದ ಪ್ರಕರಣದ ಸಿಂಧುತ್ವ ಪ್ರಶ್ನಿಸಿ ಶಾಸಕ ರಿಝ್ವಾನ್ ಅರ್ಷದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಅರ್ಜಿದಾರರು ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದರ ಕುರಿತು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿಲ್ಲ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸುವಾಗ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಬದಿಗೆ ಸರಿಸಲಾಗಿದೆ ಎಂದು ಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣವೇನು?: ‘ದೊಡ್ಡನೆಕ್ಕುಂದಿ ಗ್ರಾಮದ ಕೋದಂಡರಾಮ ಸರ್ಕಲ್ ದೇವಾಲಯದಲ್ಲಿ 2019ರ ಎಪ್ರಿಲ್ 13ರಂದು ನಡೆಯುತ್ತಿದ್ದ ಶ್ರೀರಾಮನವಮಿ ಪಲ್ಲಕ್ಕಿ ಉತ್ಸವದ ವೇಳೆ ಅನುಮತಿ ಪಡೆಯದೆ ರಿಝ್ವಾನ್ ಅರ್ಷದ್ ಚುನಾವಣಾ ಪ್ರಚಾರದ ಅಂಗವಾಗಿ ರೋಡ್ ಶೋ ನಡೆಸಿದರು’ ಎಂದು ಆರೋಪಿಸಿ ಚುನಾವಣಾ ಅಧಿಕಾರಿಗಳು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.