ಮನಪಾದಿಂದ ಜನರ ಮೇಲೆ ಸಾಲದ ಹೊರೆ ಆರೋಪ: ಶ್ವೇತ ಪತ್ರ ಹೊರಡಿಸಲು ಪ್ರತಿಪಕ್ಷದ ಒತ್ತಾಯ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ವಿಲೇಗೆ ಸಂಬಂಧಿಸಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗೆ ಕೋಟಿಗಟ್ಟಲೆ ಹಣ ಬಾಕಿ ಪಾವತಿಯಾಗಬೇಕಾಗಿದೆ. ಈ ನಡುವೆ, ಹಲವು ತುಂಡು ಗುತ್ತಿಗೆಗಳಡಿ ಕಾಮಗಾರಿಗಳಿಗೆ ಸಾಲದ ರೂಪದಲ್ಲಿ ಸುಮಾರು 100 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ಮಂಗಳೂರು ಮಹಾನಗರ ಪಾಲಿಕೆ ಸಾವಿರಾರು ಕೋಟಿ ರೂ.ಗಳ ಸಾಲದಲ್ಲಿದ್ದು, ಜನಸಾಮಾನ್ಯರಿಗೆ ತೆರಿಗೆ ಬರೆ ಹಾಕಲಾಗುತ್ತಿದೆ ಎಂಬ ಆರೋಪ ಪಾಲಿಕೆಯ ಪ್ರತಿಪಕ್ಷದಿಂದ ವ್ಯಕ್ತವಾಗಿದೆ.
ನೂತನ ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ಇಂದು ಆಯೋಜಿಸಲಾದ ಮಂಗಳೂರು ಮಹಾನಗರ ಪಾಲಿಕೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಈ ಆರೋಪ ಮಾಡಲಾಗಿದೆ. ಪ್ರತಿಪಕ್ಷದ ಸದಸ್ಯರಾದ ಅಬ್ದುಲ್ ರವೂಫ್ ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿ, ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆ ನಡೆಸುತ್ತಿರುವ ಗುತ್ತಿಗೆ ಸಂಸ್ಥೆಗೆ ಸುಮಾರು 100 ಕೋಟಿ ರೂ. ಪಾವತಿಗೆ ಬಾಕಿ ಇದೆ. ಈ ನಡುವೆ ತುಂಡು ಗುತ್ತಿಗೆಯಡಿ ಕಾಮಗಾರಿ ನಿರ್ವಹಿಸಲು ಮತ್ತೆ 100 ಕೋಟಿ ರೂ.ಗಳ ಸಾಲ ಪಡೆಯಲು ಮುಂದಾಗಿದೆ. ಈಗಾಗಲೇ ಸುಮಾರು 1500 ಕೋಟಿ ರೂ.ಗಳ ಸಾಲದ ಹೊರೆಯನ್ನು ಮಹಾನಗರ ಪಾಲಿಕೆ ಹೊಂದಿದೆ. ಜನರು ತಮ್ಮ ಆಸ್ತಿ ಮಾರಿ ತೆರಿಗೆ ಕಟ್ಟುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಪಾಲಿಕೆಯಲ್ಲಿ 2020ರಿಂದ 22ನೆ ಸಾಲಿನವರೆಗಿನ ಲೆಕ್ಕಪತ್ರಗಳ ಸಮಗ್ರ ಮಾಹಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂದು ಹಿರಿಯ ಸದಸ್ಯ ಶಶಿಧರ ಶೆಟ್ಟಿ ಆಗ್ರಹಿಸಿದರು.
ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಈ ಬಗ್ಗೆ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಧಾರವಾಗಿದ್ದು, ಪ್ರತಿ ಕಾಮಗಾರಿಗಳಿಗೂ ಆಯಾ ಲೆಕ್ಕ ಶೀರ್ಷಿಕೆಯಡಿ ವ್ಯವಸ್ಥಿತವಾಗಿ ಖರ್ಚು ಮಾಡಲು ಕ್ರಮ ವಹಿಲಾಗಿದೆ. ಇಲ್ಲಿ ಶ್ವೇತ ಪತ್ರದ ಅಗತ್ಯವೇ ಇಲ್ಲ ಎಂದು ಹೇಳಿದರು.
ಈ ಬಗ್ಗೆ ಸದಸ್ಯರ ನಡುವೆ ಚರ್ಚೆ ನಡೆಯಿತು. ಸದನದ ಎಲ್ಲಾ ಸದಸ್ಯರಿಗೂ ಖರ್ಚು ವೆಚ್ಚಗಳ ಮಾಹಿತಿ ದೊರೆಯುವ ಉದ್ದೇಶದಿಂದ ಶ್ವೇತ ಪತ್ರವನ್ನು ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ಪ್ರತಿಪಕ್ಷದ ಸದಸ್ಯರು ಒತ್ತಾಯಿಸಿದರು.
ತ್ಯಾಜ್ಯ ನಿರ್ವಹಣೆ ಗುತ್ತಿಗೆ ಬಗ್ಗೆ ಶೀಘ್ರ ಸರ್ವ ಸದಸ್ಯರ ಸಭೆ: ಮೇಯರ್
ಪ್ರತಿಪಕ್ಷದ ಸದಸ್ಯ ವಿನಯರಾಜ್ ತ್ಯಾಜ್ಯ ನಿರ್ವಹಣೆಯ ನೂತನ ಗುತ್ತಿಗೆಯ ಪ್ರಸ್ತಾವನೆಯ ಕುರಿತಂತೆ ಮೇಯರ್ ಸೇರಿದಂತೆ ಪಾಲಿಕೆಯ ಸದಸ್ಯರನ್ನು ಕತ್ತಲೆಯಲ್ಲಿರಿಸಲಾಗಿದೆ ಎಂದು ಆರೋಪಿಸಿದರು. ತ್ಯಾಜ್ಯ ವಿಲೇವಾರಿ ಸಂಬಂಧ ಈ ಹಿಂದೆ ರಾಮಕೃಷ್ಣ ಮಿಷನ್ ಮತ್ತು ಎಪಿಡಿಯು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಿತ್ತು. ಆದರೆ, ಈ ಎರಡೂ ಡಿಪಿಆರ್ ಕಡೆಗಣಿಸಿ ಹೊಸ ಡಿಪಿಆರ್ ಅನ್ನು ಮನಪಾ ರಾಜ್ಯ ಸರಕಾರಕ್ಕೆ ಕಳುಹಿಸಿದೆ ಎಂದರು. ಪ್ರತಿಪಕ್ಷ ನಾಯಕ ನವೀನ್ ಡಿಸೋಜಾ ಪ್ರತಿಕ್ರಿಯಿಸಿ, ಹೊಸ ಡಿಪಿಆರ್ ಕುರಿತು ನಾಕರಿಕರಿಗೆ ತಿಳಿಯಬೇಕು. ಸಾಧಕ ಬಾಧಕಗಳ ಕುರಿತು ಪಾಲಿಕೆ ಸಭೆಯಲ್ಲಿ ಚರ್ಚೆ ನಡೆಸಿ ಬಳಿಕ ಅಂತಿಮಗೊಳಿಸಬೇಕಿತ್ತು. ಸದ್ಯ ಈ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು.
ಪಾಲಿಕೆ ಪರಿಸರ ಅಭಿಯಂತರ ಶಬರಿನಾಥ್ ಪ್ರತಿಕ್ರಿಯಿಸಿ, ಪಾಲಿಕೆ ಸಲ್ಲಿಕೆ ಮಾಡಿದ ಎರಡೂ ಡಿಪಿಆರ್ ಅನ್ನು ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಮಿತಿ ಪರಿಶೀಲನೆ ನಡೆಸಿದೆ. ಪ್ರಸ್ತಾವನೆಯಲ್ಲಿರುವ ಸಂದೇಹಗಳ ಬಗ್ಗೆ ಸಂಬಧಪಟ್ಟವರಲ್ಲಿ ಮಾಹಿತಿಯನ್ನೂ ಪಡೆಯಲಾಗಿದೆ. ಮರು ಪರಿಶೀಲಿಸಿ ಒಂದೇ ಡಿಪಿಆರ್ ಸಲ್ಲಿಕೆಗೆ ತಿಳಿಸಿದ್ದಾರೆ. ಅದರಂತೆ ಪಾಲಿಕೆ ಮಟ್ಟದಲ್ಲಿ ಸಭೆ ಕರೆದು ಒಂದು ಡಿಪಿಆರ್ ಸಲ್ಲಿಕೆ ಮಾಡಲಾಗಿದೆ. ಅದು ಹೈ ಪವರ್ ಕಮಿಟಿ ಮುಂದೆ ಈ ಡಿಪಿಆರ್ ಇದೆ ಎಂದರು.
ನಾಮ ನಿರ್ದೇಶಿತ ಸದಸ್ಯ ರಾಧಾಕೃಷ್ಣ ಮಾತನಾಡಿ, ತ್ಯಾಜ್ಯ ವಿಲೇವಾರಿ ಗಂಭೀರ ವಿಚಾರ. ಮೇಯರ್ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ಮಾಡಿ ಎಂದು ಸಲಹೆ ನೀಡಿದರು.
ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ಷೇಪ, ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ರಾಜ್ಯ ಸರಕಾರಕ್ಕೆ ಕಳುಹಿಸಿದ ಹೊಸ ಡಿಪಿಆರ್‌ನ ಸಾಧಕ ಬಾಧಕಗಳ ಕುರಿತು ಚರ್ಚಿಸಲು ಸದ್ಯದಲ್ಲೇ ಪಾಲಿಕೆ ಸದಸ್ಯರ ಸಭೆ ಕರೆಯಲಾಗುವುದು ಎಂದು ಮೇಯರ್ ಜಯಾನಂದ ಅಂಚನ್ ಹೇಳಿದರು.
ಎಲ್‌ಇಡಿ ಬೀದಿ ದೀಪ: ಅಧಿಕಾರಿಗಳಿಂದ ತಪ್ಪು ನಡೆ ಆರೋಪ
2020ರಿಂದ ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವುದಾಗಿ ಹೇಳುತ್ತಾ ಮೂರು ವರ್ಷಗಳಿಂದ ನಗರವನ್ನು ಕತ್ತಲಿನಲ್ಲಿರಿಸಲಾಗಿದೆ. ಸಾರ್ವಜನಿಕರು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಇತ್ತ ಕಾಮಗಾರಿಯನ್ನು ಮೂರು ವಿಭಿನ್ನ ಕಂಪನಿಗಳಿಗೆ ನೀಡಲಾಗಿದ್ದು, ಒಪ್ಪಂದ ಪತ್ರದಲ್ಲಿ ಅವರ ಸಹಿಯೇ ಇಲ್ಲವಾಗಿದೆ. 2021ರ ಫೆಬ್ರವರಿಗೆ ಎಲ್‌ಇಡಿ ಅಳವಡಿಕೆ ಕಾರ್ಯ ಮುಗಿಸಬೇಕಾಗಿತ್ತು. ಬಳಿಕ ಅವಧಿ ವಿಸ್ತರಣೆ ಮಾಡುವುದನ್ನೂ ವಿಳಂಬ ಮಾಡಲಾಗಿದೆ. ಸುಮಾರು 79 ಕೋಟಿರೂ.ಗಳ ಯೋಜನೆ ಕಳೆದ ಮೂರು ವರ್ಷಗಳಿಂದ ಇನ್ನೂ ಮುಗಿಯದೆ ಸಾರ್ವಜನಿಕರ ಪ್ರಶ್ನೆಗಳಿಗೆ ಸದಸ್ಯರು ಉತ್ತರಿಸದಂತಾಗಿದೆ ಎಂದು ಪ್ರತಿಪಕ್ಷದ ಸದಸ್ಯ ಎಸಿ ವಿನಯ ರಾಜ್ ಆಕ್ಷೇಪಿಸಿದರು. ಸದಸ್ಯ ಪ್ರವೀಣ್ ಚಂದ್ರ ಆಳ್ವ ಅವರೂ ದನಿಗೂಡಿಸಿದರು.
ಈ ಬಗ್ಗೆ ಸಭೆ ಕರೆದು ಕ್ರಮ ಕೈಗೊಳ್ಳುವುದಾಗಿ ಮೇಯರ್ ಜಯಾನಂದ ಅಂಚನ್ ಹೇಳಿದರು.
'ಇ-ಖಾತ ಸಮಸ್ಯೆ ಸರಿಪಡಿಸಿ'
ಮಾಜಿ ಮೇಯರ್ ಶಶಿಧರ ಹೆಗ್ಡೆ ಮಾತನಾಡಿ, ಪಾಲಿಕೆ ವ್ಯಾಪ್ತಿ ಇ-ಖಾತ ವ್ಯವಸ್ಥೆ ಜಾರಿಗೆ ತಂದಿದ್ದು, ಇನ್ನೂ ಸಮರ್ಪಕವಾಗಿ ಅನಿಷ್ಠಾನವಾಗಿಲ್ಲ. ಪ್ರತೀ ದಿನ ಸರ್ವರ್ ಸಮಸ್ಯೆ ಎಂದು ಅಧಿಕಾರಿಗಳು ಹೇಳಿತ್ತಿದ್ದು, ಖಾತಾ ವಿತರಣೆಗೆ ವಿಳಂಬವಾಗುತ್ತಿದೆ. ಇನ್ನು, ನೀರಿನ ಬಿಲ್ ಪಾವತಿ ಮಾಡಲೂ ಸರ್ವರ್ ಸಮಸ್ಯೆ ಎದುರಾಗಿದೆ ಎಂದರು.
ಟ್ರಾಫಿಕ್ ಸಮಸ್ಯೆ ಕುರಿತು ಪಾಲಿಕೆ ಸಭೆಯಲ್ಲಿ ಚರ್ಚೆ ವೇಳೆ ವಿನಯರಾಜ್ ಪ್ರತಿಕ್ರಿಯಿಸಿ ಉಪಮೇಯರ್ ಅವರಿಗೆ ಸಭೆಯಿಂದ ತೆರಳಲು ಅವಸರವಿದೆ ಅನಿಸುತ್ತದೆ. ಈ ಹಿನ್ನೆಲೆಯಲ್ಲಿ ಸಭೆ ಬೇಗ ಮುಗಿಸುವಂತೆ ಮೇಯರ್ ಅವರಲ್ಲಿ ಹೇಳುತ್ತಿದ್ದಾರೆ. ಪಾಲಿಕೆ ಸಭೆ ಅಂದರೆ ಅಲ್ಲಿ ವಿಸ್ತೃತ ಸಭೆ ನಡೆಯಬೇಕು ಎಂದರು. ಪ್ರೇಮಾನಂದ ಶೆಟ್ಟಿ ಮಾತನಾಡಿ, ಓರ್ವ ಮಹಿಳೆಯ ಕುರಿತು ಈ ರೀತಿ ಮಾತನಾಡಬಾರದು ಎಂದರು. ಆ ವೇಳೆ ಪಾಲಿಕೆ ಸಭೆಯಲ್ಲಿ ಗದ್ದಲ ಉಂಟಾಯಿತು. ಉಪಮೇಯರ್ ಪೂರ್ಣಿಮ ಮಾತನಾಡಿ, ನಾನು ಮೇಯರ್ ಅವರಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಹೇಳಿದ್ದೇನೆಯೇ ಹೊರತು ಬೇರೇನಲ್ಲ ಎಂದರು.
ನಗರದಲ್ಲಿ ಅನೇಕ ರಸ್ತೆಗಳು ಅಗಲಗೊಂಡಿದ್ದರೂ ಅವುಗಳು ವಾಹನ ಸಂಚಾರಕ್ಕೆ ಬಳಕೆಯಾಗುತ್ತಿಲ್ಲ. ಬದಲಾಗಿ ಅಲ್ಲಿ ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿದೆ ಎಂದು ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ ಹೇಳಿದರು. ದಸರಾ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉದ್ಬವಿಸದಂತೆ ಗಮನಹರಿಸಬೇಕಿದೆ ಎಂದು ಮೇಯರ್ ಹೇಳಿದರು. ಟ್ರಾಫಿಕ್ ಎಸಿಪಿ ಗೀತಾಕುಲಕರ್ಣಿ ಮಾತನಾಡಿ, ಸಂಚಾರದಟ್ಟಣೆ ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದರು.
ಉಪ ಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಹೇಮಲತಾ ರಘು ಸಾಲಿಯಾನ್, ಶಕಿಲಾ ಕಾವ ಮತ್ತು ನಯನ ಆರ್.ಕೋಟ್ಯಾನ್ ಉಪಸ್ಥಿತರಿದ್ದರು.
ಮಂಗಳೂರು ದಸರಾಗೆ ಅನುದಾನ: ಸರಕಾರಕ್ಕೆ ಪತ್ರ
ಮಂಗಳೂರು ದಸರಾ ಹಿನ್ನೆಲೆಯಲ್ಲಿ ಪಾಲಿಕೆಯಿಂದ ನಗರದಾದ್ಯಂತ 95 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರಗೊಳಿಸಲಾಗಿದೆ. ಮೈಸೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಿಶೇಷ ಅನುದಾನ ನೀಡುತ್ತದೆ. ಮಂಗಳೂರು ದಸರಾ ಹಬ್ಬದ ಕುರಿತು ರಾಜ್ಯ ಸರಕಾರದ ಗಮನಕ್ಕೆ ತಂದು 5 ಕೋಟಿ ರೂ. ಅನುದಾನ ನೀಡುವಂತೆ ಪಾಲಿಕೆಯಿಂದ ಸರಕಾರಕ್ಕೆ ಪತ್ರ ಬರೆಯಬೇಕು ಎಂದು ಸುಧೀರ್ ಶೆಟ್ಟಿ ಕಣ್ಣೂರು ಅವರು ತಿಳಿದರು. ಶಶಿಧರ ಹೆಗ್ಡೆ ಅವರು ಧ್ವನಿಗೂಡಿಸಿದರು. ಮೇಯರ್ ಪ್ರತಿಕ್ರಿಯಿಸಿ ಸರಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.
ಸ್ಮಾರ್ಟ್ ಸಿಟಿಯಲ್ಲಿ ಭ್ರಷ್ಟಾಚಾರ ಆರೋಪ: ವಿಷಯ ಪ್ರಸ್ತಾವನೆಗೆ ಸಿಗದ ಅವಕಾಶ!
ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಮಾಂಡ್ ಕಂಟ್ರೋಲ್ ರೂಂ.ನ ಎರಡನೇ ಹಂತದ 28 ಕೋಟಿ ರೂ. ಕಾಮಗಾರಿ ಟೆಂಡರ್ ಅನ್ನು ಬ್ಲ್ಯಾಕ್ ಲೀಸ್ಟ್ ಕಂಪೆನಿಗೆ ನೀಡಲಾಗಿದೆ. ಈ ಮೂಲಕ ಭ್ರಷ್ಟಾಚಾರ ಎಸಗಲಾಗಿದೆ ಎಂದು ಸಭೆಯಲ್ಲಿ ಪ್ರತಿಪಕ್ಷದ ಸದಸ್ಯ ವಿನಯ ರಾಜ್ ಆರೋಪ ವ್ಯಕ್ತಪಡಿಸಲು ಆರಂಭಿಸಿದಾಗ ಮೇಯರ್ ಕಾರ್ಯಸೂಚಿ ಮಂಡಿಸಲು ಮುಖ್ಯ ಸಚೇತಕರಿಗೆ ಸೂಚಿಸಿದರು. ತನಗೆ ಐದು ನಿಮಿಷ ಮಾತನಾಡಲು ಅವಕಾಶ ನೀಡಬೇಕು ಎಂದು ವಿನಯ ರಾಜ್ ಆಗ್ರಹಿಸಿದಾಗ, ಈ ಬಗ್ಗೆ ಆಮೇಲೆ ಮಾತನಾಡೋಣ ಎಂದು ಹೇಳುತ್ತಾ ಕಾರ್ಯಸೂಚಿ ಮಂಡಿಸಲು ಮೇಯರ್ ಸೂಚಿಸಿದರು.















