ಹಕ್ಕು ಪತ್ರ ವಿತರಿಸದೆ ಮೀನಾಮೇಷ ಅರೋಪ: ಸರ್ಕಾರಕ್ಕೆ ಕಾನೂನು ಭಂಗ ಚಳವಳಿ ಎಚ್ಚರಿಕೆ
ಶರಾವತಿ ಮುಳುಗಡೆ ಸಂತ್ರಸ್ತರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ, ಸೆ.30: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಜಮೀನಿನ ದಾಖಲೆಗಳನ್ನು ಬದಲಾವಣೆ ಮಾಡದಿರುವುದನ್ನು ಖಂಡಿಸಿ ಶರಾವತಿ ಮುಳುಗಡೆ ಸಂತ್ರಸ್ತರು ಇಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ತೀ.ನಾ ಶ್ರೀನಿವಾಸ್, ಅಂದಿನ ಸರ್ಕಾರ ಶರಾವತಿ ನದಿಗೆ ಲಿಂಗನಮಕ್ಕಿ ಆಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದನೆಗಾಗಿ 1960 ರಲ್ಲಿ 1 ಲಕ್ಷ ಎಕರೆ ಭೂಮಿಯನ್ನು ಭೂಸ್ವಾದಿನ ಪಡಿಸಿಕೊಳ್ಳಲಾಗಿತ್ತು.ಈ ಯೋಜನೆಗಾಗಿ ಭೂಮಿಯನ್ನು ಕಳೆದುಕೊಂಡ ಕುಟುಂಬಗಳಿಗೆ 1959-60 ರಲ್ಲಿ 13,500 ಎಕರೆ ಅರಣ್ಯ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿ ಸುಮಾರು 36 ಕ್ಕೂ ಹೆಚ್ಚು ಸರ್ಕಾರಿ ಆದೇಶಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಭೂಮಿಯಲ್ಲಿ ಸುಮಾರು 25,000 ಕುಟುಂಬಗಳು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ.ಇವರಿಗೆ ಹಕ್ಕು ಪತ್ರ ವಿತರಿಸದೆ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಜಿಲ್ಲೆಯ ಸಂಸದರಿಗೆ,ಶಾಸಕರಿಗೆ ಮುಳುಗಡೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಲು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು. ಹಾಗಾಗಿ ಅರ್ಜಿ ವಜಾ ಮಾಡಿರುವುದಾಗಿ ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ ಎಂದರು.
ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡುವ ನಿಯಮ ಪಾಲನೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡುವಲ್ಲಿ ಹೈಕೋರ್ಟ್ ನ ವಿರೋಧವಿಲ್ಲ.ರಾಜ್ಯ ಸರ್ಕಾರ ಕೇಂದ್ರದ ಅನುಮತಿ ಪಡೆದುಕೊಂಡು ಭೂಮಿ ಹಂಚಿಕೆ ಮಾಡಬಹುದು ಎಂದು ತಿಳಿಸಿದೆ ಎಂದರು.
ನಾನು ಮುಳುಗಡೆ ಸಂತ್ರಸ್ತ ಎಂದು ಹೇಳಿಕೊಳ್ಳುವ ಸಾಗರ ಶಾಸಕ ಹರತಾಳು ಹಾಲಪ್ಪ ಸಹ ಮುಖ್ಯಮಂತ್ರಿಗಳಿಗೆ ಈ ವಿಚಾರದಲ್ಲಿ ಒತ್ತಾಯ ಮಾಡುತ್ತಿಲ್ಲ. ಜನಪ್ರತಿನಿಧಿಗಳು ಚುನಾವಣೆಯಲ್ಲಿ ನಿಲ್ಲಲು ಮತ್ತು ಗೆಲ್ಲಲು ಗಂಟು ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಆರೋಪಿಸಿದ ಅವರು, ಮುಳುಗಡೆ ಸಂತ್ರಸ್ಥರ ಹಾಗೂ ರೈತರ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರು ಕಳೆದ ಎರಡು ವರ್ಷಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಎಚ್ಚೆತ್ತಿಲ್ಲ. ಹತ್ತರಿಂದ ಹದಿನೈದು ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕುತ್ತೇವೆ. ಸಂಸದರು, ಶಾಸಕರ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ಯಡಿಯೂರಪ್ಪ ಡಿಸಿಎಂ, ಸಿಎಂ ಆಗಿದ್ದವರು, ಅವರ ಮಗ ಮೂರು ಬಾರಿ ಸಂಸದರಾಗಿದ್ದಾರೆ. ಈಗ ಮುಳುಗಡೆ ಸಂತ್ರಸ್ಥರನ್ನು ಕಡೆಗಣಿಸುತ್ತಿದ್ದಾರೆ. ನಾನು ಸಾಯುವರೆಗೂ ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದಿದ್ದಾರೆ. ಅಂದರೆ ಯಡಿಯೂರಪ್ಪ ಸಾಯುವವರೆಗೂ ಹಕ್ಕುಪತ್ರ ಸಿಗುವುದಿಲ್ಲ ಎನ್ನುವುದು ಅವರ ಮಾತಿನಿಂದ ಖಾತ್ರಿಯಾಗಿದೆ ಎಂದರು.
ಸುಮಾರು 70 ವರ್ಷಗಳಿಂದ ರೈತರು ಬಗರ್ ಹುಕುಂ ಜಮೀನು ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ. ಕೃಷಿ ಭೂಮಿಯನ್ನು ಬಂಡವಾಳ ಶಾಹಿಗಳು ತೆಗೆದುಕೊಳ್ಳಬಹುದೆಂದು ಕಾನೂನು ತಿದ್ದುಪಡಿ ಮಾಡಿ ಜಾರಿಗೆ ತರುತ್ತೀರಿ, ರೈತ ವಿರೋಧಿ ಕಾನೂನುಗಳನ್ನು ಚರ್ಚಿಸಿದೇ ಜಾರಿ ಮಾಡುತ್ತೀರಿ. ಒಂದು ವರ್ಷದ ರೈತ ಹೋರಾಟದಲ್ಲಿ ಸಾವಿರಾರು ಜನ ರೈತರು ಸತ್ತ ನಂತರ ಕಾನೂನನ್ನು ವಾಪಸ್ ತೆಗೆದುಕೊಳ್ಳುತ್ತೀರಿ, ಬಗರ್ ಹುಕುಂ ಸಮಸ್ಯೆಯನ್ನು ಬಗೆಹರಿಸಲು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸಂಸದರು, ಶಾಸಕರ ವೇತನವನ್ನು ಹೆಚ್ಚಿಸಲು ಚರ್ಚೆ ಮಾಡದೇ ತೀರ್ಮಾನ ಮಾಡುತ್ತೀರಿ, ಆದರೆ ಶರಾವತಿ ಮುಳುಗಡೆಯವರ ಬಗ್ಗೆ ಕಾನೂನು ತಿದ್ದುಪಡಿ ಮಾಡಲು ಏಕೆ ಹಿಂದೇಟು ಹಾಕುತ್ತಿದ್ದೀರಿ. ಕೂಡಲೇ ಕೇಂದ್ರ ಸರ್ಕಾರದ ಅನುಮತಿ ತೆಗೆದುಕೊಳ್ಳಲು ಇರುವ ತೊಂದರೆ ಏನು ಎಂದರು.
ನಮ್ಮ ಗೃಹ ಮಂತ್ರಿಗಳು ಬರೀ ಸುಳ್ಳು ಹೇಳುತ್ತಾರೆ. ಕಳೆದ ಬಾರಿ ಚಳುವಳಿ ಮಾಡಿದಾಗ, ಪೋನಿನಲ್ಲಿ 15 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಆದರೆ 150 ದಿನ ಕಳೆದರೂ, ಈ ವಿಷಯದಲ್ಲಿ ಗೃಹ ಮಂತ್ರಿಗಳು ಚಕಾರ ಎತ್ತುತ್ತಿಲ್ಲ. ಶರಾವತಿ ಮುಳುಗಡೆ ಸಂತ್ರಸ್ಥರ ಬಗ್ಗೆ ಮಾತನಾಡುತ್ತಿಲ್ಲ. ನಾವು ಕಾನೂನು ಭಂಗ ಚಳವಳಿ ಮಾಡುತ್ತೇವೆ ಎಂದರು.
ಜಿಲ್ಲೆಯಲ್ಲಿನ ಎಲ್ಲಾ ಶಾಸಕರು ಮತ್ತು ಸಂಸದರು ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಅನುಮತಿ ಪಡೆದುಕೊಂಡು ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.
ನ್ಯಾಯಾಲಯದಲ್ಲಿ ಕೆಲವು ಪರಿಸರವಾದಿಗಳು ಎಂದು ಸುಳ್ಳು ಹೇಳಿಕೊಂಡು ಮುಳುಗಡೆ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ ಈಗಾಗಲೇ ನೀಡಲಾಗಿರುವ ಹಕ್ಕುಪತ್ರಗಳನ್ನು ವಜಾ ಮಾಡಿ, ಆರ್ ಟಿಸಿ ನಲ್ಲಿ ಅರಣ್ಯವೆಂದು ನಮೂದಿಸುತ್ತೇವೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಒಂದು ವೇಳೆ ಹಾಗೆ ಮಾಡಿದರೆ, ದಂಗೆ ಏಳುತ್ತೇವೆ. ರಕ್ತಕ್ರಾಂತಿ ಮಾಡುವ ಪರಿಸ್ಥಿತಿ ರೈತರಿಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಬಿ.ರಾಜಪ್ಪ, ನಾರಾಯಣಪ್ಪ, ಗುರಮೂರ್ತಿ, ರಘುಪತಿ, ಕಲನ್, ರಮೇಶ್, ವಕೀಲ ಎನ್.ಪಿ.ಧರ್ಮರಾಜ್ ಸೇರಿದಂತೆ ಹಲವರಿದ್ದರು.