ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಪದವಿ ಪ್ರದಾನ

ಉದ್ಯಾವರ, ಅ.1: ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಂಭಾಗಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳ ‘ವಿಶಿಖಾನುಪ್ರವೇಶ’ ಪದವಿ ಪ್ರದಾನ ಸಮಾರಂಭ ನಡೆಯಿತು.
ಹೊಸದಿಲ್ಲಿಯ ಮೆಡಿಕಲ್ ಅಸೆಸ್‌ಮೆಂಟ್ ಎಂಡ್ ರೇಟಿಂಗ್ ಬೋರ್ಡ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (ಎನ್‌ಸಿಐಎಸ್‌ಎಂ) ಸಂಸ್ಥೆಯ ಅಧ್ಯಕ್ಷರಾದ ಡಾ.ರಘುರಾಮ್ ಭಟ್ಟ ಯು. ಪದವಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಅಧ್ಯಯನ ಶಾಸ್ತ್ರಾಭ್ಯಾಸಮತ್ತು ಕರ್ಮಾಭ್ಯಾಸದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಸಂಸ್ಕೃತ ಭಾಷಾ ಅಧ್ಯಯನದ ಮಹತ್ವ ವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಧಾರವಾಡ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್.ಕೆ.ಜೋಶಿ ಮಾತನಾಡಿ ಆಯುರ್ವೇದ ವೈದ್ಯ ಪದ್ಧತಿಯನ್ನು ಪಾಲಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ಒತ್ತಿ ಹೇಳಿದರು. ಬೆಂಗಳೂರು ಎಸ್‌ಡಿಎಂ ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಜಗದೀಶ್‌ಕುಂಜಾಲ್ ಅವರು ಉಪಸ್ಥಿತರಿದ್ದರು.
ಎಸ್‌ಡಿಎಂ ಆಯುರ್ವೇದ ಕಾಲೇಜಿನ ಹಳೆದ್ಯಾರ್ಥಿ ಸಂಘದ ವತಿಯಿಂದ ನೀಡಲಾದ ಚಿನ್ನದ ಪದಕವನ್ನು ಸ್ನಾತಕ ವಿದ್ಯಾರ್ಥಿನಿ ಡಾ.ಶುಭಾ ಎಸ್. ಭಟ್ ಅವರಿಗೆ ಪ್ರಧಾನ ಮಾಡಲಾಯಿತು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ.ನಿರಂಜನ್ ರಾವ್, 71 ಸ್ನಾತಕ ಮತ್ತು 31 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಹಾಗೂ ಸ್ನಾತಕೋತ್ತರ ವಿಭಾಗದ ಸಹಾಯಕ ಡೀನ್ ಡಾ. ಸುಚೇತಕುಮಾರಿ ಎಂ. ಪದವಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ಉಪವೈದ್ಯಕೀಯ ಅಧೀಕ್ಷಕರಾದ ಡಾ. ದೀಪಕ್ ಎಸ್.ಎಂ. ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾ ಡಾ. ಮಮತಾ ಕೆ.ವಿ. ಅತಿಥಿಗಳನ್ನು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ರಾಕೇಶ್ ಆರ್. ಎನ್. ವಂದಿಸಿ, ಡಾ.ಸಂದೇಶ್‌ಕುಮಾರ್ ಶೆಟ್ಟಿ ಮತ್ತು ಡಾ. ಲಿಖಿತ ಡಿ.ಎನ್. ಕಾರ್ಯಕ್ರಮ ನಿರೂಪಿಸಿದರು.







