ಬೈಂದೂರಿನಲ್ಲಿ 70 ವರ್ಷಗಳಲ್ಲೇ ಕಾಣದ ಅಭಿವೃದ್ಧಿ: ಶಾಸಕ ಸುಕುಮಾರ ಶೆಟ್ಟಿ

ಕುಂದಾಪುರ, ಅ.1: ಬೈಂದೂರು ಕ್ಷೇತ್ರದಲ್ಲಿ ಕಳೆದ ೭೦ ವರ್ಷಗಳಲ್ಲಿ ಕಾಣದ ಅಭಿವೃದ್ಧಿ ಕಾರ್ಯಗಳು ಈ ಬಾರಿ ನಡೆದಿವೆ. ಕ್ಷೇತ್ರದಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನೀರಿಗೆ ತತ್ವಾರವಿದ್ದು, ವೆಂಟೆಂಡ್ ಡ್ಯಾಮ್ ನಿರ್ಮಾಣದ ಮೂಲಕ ಈ ಸಮಸ್ಯೆ ನೀಗಿಸಲಾಗಿದೆ. ಸೌಕೂರು ಏತ ನೀರಾವರಿ ಕಾಮಗಾರಿ ಮೂಲಕ ಗುಲ್ವಾಡಿ ಸಹಿತ 7 ಗ್ರಾಮಗಳಿಗೆ ನೀರುಣಿಸುವ ಕಾರ್ಯವಾಗುತ್ತಿದೆ. ಪ್ರತಿ ಮನೆಗಳಿಗೆ ಕುಡಿಯುವ ನೀರು ನೀಡುವ ಮಹತ್ವದ ಕಾರ್ಯಕ್ಕೆ ನ.26ರಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದ್ದಾರೆ.
ನೇರಳಕಟ್ಟೆಯ ಶ್ರೀಜಲ ಟವರ್ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕರ್ಕುಂಜೆ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಸಂಪರ್ಕ ಸಭೆ ಹಾಗೂ ಅಹವಾಲುಗಳ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬೈಂದೂರು ಕ್ಷೇತ್ರದ ಕರ್ಕುಂಜೆ ಗ್ರಾಮಕ್ಕೆ 18 ಕೋಟಿ 84 ಲಕ್ಷ ರೂ. ಅನುದಾನ ಬಂದಿದ್ದು ವಿವಿಧ ಅಭಿವೃದ್ಧಿ ಕಾರ್ಯಗಳಾಗಿವೆ. ಈಗಾಗಾಲೇ ಗ್ರಾಮಕ್ಕೆ ವಸತಿ ಯೋಜನೆಯಡಿ 30 ಮನೆಗಳು ಮಂಜೂರಾಗಿದ್ದು, ಮುಂದು ವರಿದು ಇನ್ನು 30 ಹೆಚ್ಚುವರಿ ಮನೆ ನೀಡಲು ಕ್ರಮಕೈಗೊಳ್ಳಲಾಗುತ್ತದೆ. ಬೆಳಕು ಯೋಜನೆಯಡಿ ಮನೆಗೆ ವಿದ್ಯುತ್ ನೀಡುವ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎಂದರು.
94ಸಿ, ಅಕ್ರಮ ಸಕ್ರಮ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಶ್ರಮ ವಹಿಸಲಾಗುತ್ತದೆ. ನೆಂಪುವಿನಿಂದ ಶಂಕರನಾರಾಯಣ ಸಂಪರ್ಕಕ್ಕೆ ೨೫ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ. ನೇರಳಕಟ್ಟೆಯಲ್ಲಿ ಸುಸಜ್ಜಿತ ಸರ್ಕಲ್ ಬೇಡಿಕೆಯಿದ್ದು ರಸ್ತೆ ಅಗಲೀಕರಣ ಹಾಗೂ ಸರ್ಕಲ್ ನಿರ್ಮಾಣಕ್ಕೆ ೪ ಕೋಟಿ ಅಂದಾಜುಪಟ್ಟಿ ಸಿದ್ದಪಡಿಸಲಾಗಿದೆ ಎಂದರು.
ಗ್ರಾಮದ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕರು ಇಲ್ಲಿನ ೫ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿ ರುವುದು ಹಾಗೂ ಮಕ್ಕಳಿಗೆ ಉತ್ತಮ ಸೌಕರ್ಯ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಡಿತರಕ್ಕಾಗಿ ಜನರು ಕಾಯುವುದನ್ನು ತಪ್ಪಿಸಲು ಅಗತ್ಯ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ವೋಲ್ಟೇಜ್ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ಮನವಿ ನೀಡಿದ್ದು ಪೂರಕ ವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲು ಸ್ಬೀಕರಿಸಲಾಯಿತು.
ಕರ್ಕುಂಜೆ ಗ್ರಾಪಂ ಅಧ್ಯಕ್ಷೆ ಶ್ರೀಮತಿ, ಉಪಾಧ್ಯಕ್ಷ ಸಂತೋಷ್ ಪೂಜಾರಿ, ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ, ತಾಪಂ ಕಾರ್ಯ ನಿರ್ವಹ ಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ವರ್ಣೇಕರ್, ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ವಾರಾಹಿ ಇಂಜಿನಿಯರ್ ಪ್ರಸನ್ನ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿರ್ಯ ದುರ್ಗಾದಾಸ್, ಗ್ರಾಮಾಂತರ ಠಾಣೆ ಪಿಎಸ್‌ಐ ಪವನ್ ಕುಮಾರ್ ಸಹಿತ ವಿವಿಧ ಇಲಾಖಾಧಿಕಾರಿಗಳಿದ್ದರು.
ಕಂದಾಯ ಅಧಿಕಾರಿ ರಾಘವೇಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.








