ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪ್ರದಾನ: 950 ವಿದ್ಯಾರ್ಥಿಗಳಿಗೆ ಬಿಇ ಮತ್ತು ಎಂಬಿಎ ಪದವಿ ಪ್ರದಾನ

ಮಂಗಳೂರು, ಅ.1: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ 12ನೆ ಪದವಿ ಪ್ರದಾನ ಸಮಾರಂಭ ಶನಿವಾರ ನಡೆಯಿತು.
ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್‌ನಲ್ಲಿ ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮೈಂಡ್‌ಟ್ರೀ ಲಿಮಿಟೆಡ್‌ನ ವರ್ಟಿಕಲ್ ಗ್ರೂಪ್‌ಗಳಾದ್ಯಂತ ಗ್ಲೋಬಲ್ ಡೆಲಿವರಿ ಹೆಡ್ ಸುರೇಶ್ ಎಚ್.ಪಿ.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅವರು ಮಾತನಾಡಿ, ಪ್ರಪಂಚದಾದ್ಯಂತ ದೊಡ್ಡ ಗೊಂದಲವನ್ನು ಸೃಷ್ಟಿಸಿದ ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ ಪ್ರಸ್ತಾಪಿಸಿ ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತವು ಲಸಿಕೆ ಕಾರ್ಯಕ್ರಮಗಳನ್ನು ಮತ್ತು ರಾಷ್ಟ್ರವ್ಯಾಪಿ ವಿತರಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ಭಾರತದ ಈ ಕಾರ್ಯದ ಬಗ್ಗೆ ಹೆಮ್ಮೆಪಡುತ್ತಿದ್ದೇವೆ, ಆದರೆ ದೇಶದ ಬೆಳವಣಿಗೆಯು ಕಡಿಮೆಯಾಗಿದೆ. ಆದಾಗ್ಯೂ, ಪದವೀಧರರು ತಮ್ಮ ಜ್ಞಾನವನ್ನು ಆಚರಣೆಗೆ ತರಲು ಮತ್ತು ನಮ್ಮ ರಾಷ್ಟ್ರದ ಅಭಿವೃದ್ಧಿಯನ್ನು ಮುನ್ನಡೆಸಲು ಸಮರ್ಪಕ ಕಾಲಘಟ್ಟದಲ್ಲಿದ್ದಾರೆ ಎಂದರು.
ಸಮಾರಂಭದಲ್ಲಿ ಒಟ್ಟು 950 ವಿದ್ಯಾರ್ಥಿಗಳಿಗೆ ಬಿಇ ಮತ್ತು ಎಂಬಿಎ ಪದವಿಗಳನ್ನು ಪ್ರದಾನ ಮಾಡಲಾಯಿತು.
ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲರಾದ ಡಾ. ರಾಜೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕಾಲೇಜು ಸಾಧಿಸಿರುವ ವಿವಿಧ ಶ್ರೇಣಿಗಳನ್ನು ಪ್ರಕಟಿಸಿದರು.
ಎಐಎಂಎಲ್‌ನ ಮುಖ್ಯಸ್ಥೆ ಡಾ ಪುಷ್ಪಲತಾ ಕೆ., ನಿರ್ದೇಶಕ ಹಾಗೂ ಸಮಾಲೋಚಕ ಡಾ. ಮಂಜಪ್ಪ ಸಾರಥಿ ಉಪಸ್ಥಿತರಿದ್ದರು. ಭಂಡಾರಿ ಫೌಂಡೇಶನ್ ಟ್ರಸ್ಟಿಗಳಾದ ದೇವದಾಸ್ ಹೆಗ್ಡೆ ಮತ್ತು ಜಗನ್ನಾಥ ಚೌಟ, ಮತ್ತು ಎಲ್ಲಾ ವಿಭಾಗ ಮುಖ್ಯಸ್ಥರು ಮತ್ತು ಅಧ್ಯಾಪಕರು, ಇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪದವಿ ಪಡೆದ ಮೂವರು ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್‌ನಲ್ಲಿ ಕಳೆದ ಸಮಯದ ಅನುಭವಗಳನ್ನು ಹಂಚಿ ಕೊಂಡರು. ಉಪಪ್ರಾಂಶುಪಾಲರಾದ ಪ್ರೊ. ಬಾಲಕೃಷ್ಣ ಎಸ್.ಎಸ್. ವಂದಿಸಿದರು.