ಚತುಷ್ಪಥ ರಸ್ತೆ ಕಾಮಗಾರಿಗಾಗಿ ಮರ ಕಡಿತ; ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ವಂಚನೆ: ಎನ್‌ಇಸಿಎಫ್ ಆರೋಪ

ಮಂಗಳೂರು, ಅ. 1: ರಾಷ್ಟ್ರೀಯ ಹೆದ್ದಾರಿ 169ರ ಬಿಕರ್ನಕಟ್ಟೆಯಿಂದ ಸಾಣೂರುವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗಾಗಿ ಕಡಿಯಲ್ಪಡುವ ಮರಗಳ ಮೌಲ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿಗಳನ್ನು ವಂಚಿಸಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ವಂಚನೆಯಲ್ಲಿ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (NECF) ಆರೋಪಿಸಿದೆ.
ಶನಿವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎನ್‌ಇಸಿಎಫ್‌ನ ಬೆನೆಡಿಕ್ಟ್ ಫೆರ್ನಾಂಡಿಸ್, ಈ ರಾಷ್ಟ್ರೀಯ ಹೆದ್ದಾರಿಯ ಗುರುಪುರದಿಂದ ಮಿಜಾರಿನವರೆಗೆ ಒಟ್ಟು 1223 ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು. ಆದರೆ ಮರಗಳ ಸುತ್ತಳತೆ ಮತ್ತು ಎತ್ತರವನ್ನು ತಪ್ಪಾಗಿ ನಮೂದಿಸಿ ಸುಳ್ಳು ಲೆಕ್ಕ ನೀಡಿ ಕೋಟ್ಯಂತರ ರೂ. ವಂಚಿಸಿದ್ದಾರೆ. ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಇತರ ಮರಗಳನ್ನು ಕಡಿಯದಂತೆ ಹಾಗೂ ಕಡಿದ ಮರಗಳನ್ನು ಸಾಗಾಟ ಮಾಡದಂತೆ ಲೋಕಾಯುಕ್ತ ಎಸ್ಪಿ ಪ್ರಸ್ತುತ ಸೂಚನೆ ನೀಡಿದ್ದಾರೆ ಎಂದರು.
ಕೋಟ್ಯಂತರ ರೂ. ಬೆಲೆಬಾಳುವ 1223 ಮರಗಳಿಗೆ ಅರಣ್ಯ ಇಲಾಖೆಯವರು ಕೇವಲ 13,61,664 ರೂ. ಮೌಲ್ಯ ಅಂದಾಜು ಮಾಡಿದ್ದಾರೆ. ಮರ ಕಡಿಯುವ ಮೊದಲೇ ನಾವು ಮರಗಳ ಸುತ್ತಳತೆ ಮತ್ತು ಎತ್ತರವನ್ನು ಗುರುತಿಸಿ ಇಟ್ಟಿದ್ದೆವು. ಸೂರಲ್ಪಾಡಿಯಲ್ಲಿ ಬೃಹತ್ ಹಲಸಿನ ಮರ 4.5 ಮೀಟರ್ ಎತ್ತರ ಮತ್ತು 3.5 ಮೀ. ಸುತ್ತಳತೆ ಹೊಂದಿತ್ತು. ಆದರೆ ಆರ್‌ಟಿಐಯಲ್ಲಿ ಸಿಕ್ಕಿದ ಮಾಹಿತಿಯಲ್ಲಿ ಆ ಮರ ಕೇವಲ 2 ಮೀಟರ್ ಎತ್ತರ ಮತ್ತು 2.8 ಮೀ. ಸುತ್ತಳತೆ ಹೊಂದಿದ್ದಾಗಿ ನಮೂದಿಸಲಾಗಿದೆ. ಅರಣ್ಯ ಇಲಾಖೆಯು ಪ್ರತಿ ಮರಕ್ಕೆ ಸರಾಸರಿ 1,113 ರೂ. ಮೌಲ್ಯ ಕಟ್ಟಿದ್ದಾರೆ. ಆದರೆ ಈ ಹಲಸಿನ ಮರವೊಂದೇ ಕನಿಷ್ಠ 1.5 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯ ಹೊಂದಿದೆ. ಇದೇ ರೀತಿ 75 ಮೀ. ಎತ್ತರ, 5 ಮೀ. ಸುತ್ತಳತೆ ಇದ್ದ ರೆಂಜೆ ಮರದ ಎತ್ತರವನ್ನು ಕೇವಲ 2 ಮೀ. ಹಾಗೂ ಸುತ್ತಳತೆಯನ್ನು 3.3 ಮೀ. ಎಂದು ನಮೂದಿಸಿದ್ದಾರೆ. ಎಲ್ಲ ಮರಗಳ ಮೌಲ್ಯದ ಬಗ್ಗೆಯೂ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬೆನೆಡಿಕ್ಟ್ ಫೆರ್ನಾಂಡಿಸ್ ಆರೋಪಿಸಿದರು.
ಎನ್‌ಇಸಿಎಫ್ ರಾಜ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ಮಾತನಾಡಿ, ಆರ್‌ಟಿಐ ಮೂಲಕ ಸಿಕ್ಕಿದ ಮಾಹಿತಿ ಪ್ರಕಾರ ಒಟ್ಟು 1223 ಮರಗಳಲ್ಲಿ ಬಹುತೇಕ ಮರಗಳ ಎತ್ತರ 2 ಮೀ. ಆಸುಪಾಸಿನಲ್ಲಿದ್ದರೆ, ಸುತ್ತಳತೆ ಸುಮಾರು 3 ಮೀ. ನಮೂದಿಸಿದ್ದಾರೆ. ಎತ್ತರಕ್ಕಿಂತ ಸುತ್ತಳತೆಯನ್ನೇ ಹೆಚ್ಚು ತೋರಿಸಿದ್ದಾರೆ ಎಂದು ಆರೋಪಿಸಿದರು.
ಈ ಎಲ್ಲ ಲೆಕ್ಕಾಚಾರ ಕೇವಲ ಗುರುಪುರದಿಂದ ಮಿಜಾರಿನವರೆಗೆ ಮಾತ್ರ. ಉಳಿದ ಭಾಗದಲ್ಲೂ ಇದೇ ರೀತಿಯ ವಂಚನೆ ನಡೆದಿರುವ ಸಾಧ್ಯತೆಯೇ ಅಧಿಕವಾಗಿದೆ. ಕೂಡಲೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಕೋಟ್ಯಂತರ ರೂ. ಬೆಲೆಬಾಳುವ ಮರಗಳನ್ನು ಅರಣ್ಯ ಇಲಾಖೆಯು ಜುಜುಬಿ ಬೆಲೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾರಾಟ ಮಾಡಿದ್ದಾರೆ. ಈ ಮರಗಳನ್ನು ಮಾರಾಟ ಮಾಡದೆ ಹರಾಜಿನ ಮೂಲಕ ವಿಲೇವಾರಿ ಮಾಡಬೇಕಿತ್ತು. ಆಗ ಅವುಗಳ ನಿಜವಾದ ಮೌಲ್ಯ ಸರ್ಕಾರಕ್ಕೆ ಸಂದಾಯವಾಗುತ್ತಿತ್ತು. ಈಗಾಗಲೇ ಹೆದ್ದಾರಿಯ ಕೈಕಂಬದಿಂದ ಸೂರಲ್ಪಾಡಿವರೆಗಿನ 50 ಮರಗಳನ್ನು ಕಡಿದಿದ್ದಾರೆ. ಉಳಿದ ಮರಗಳನ್ನು ಕಡಿಯುವ ಮೊದಲು ತನಿಖೆಯಾಗಲಿ ಎಂದವರು ಒತ್ತಾಯಿಸಿದರು.
ಎನ್‌ಇಸಿಎಫ್‌ನ ದಿನೇಶ್ ಹೊಳ್ಳ, ಹರೀಶ್ ಪೈ, ಜಯಪ್ರಕಾಶ್ ಮತ್ತಿತರರಿದ್ದರು.
"ಸ್ಮಾರ್ಟ್ ಸಿಟಿ ಯೋಜನೆಯಡಿ ನೂರಾರು ಮರಗಳನ್ನು ಕಡಿದಿದ್ದಾರೆ. ಅದರ ಬದಲು ಎಲ್ಲಿ ಗಿಡ ನೆಟ್ಟಿದ್ದಾರೆ ಎನ್ನುವುದನ್ನು ತೋರಿಸಲಿ. ಒಂದು ಮರ ಕಡಿದರೆ ಇಂತಿಷ್ಟು ಗಿಡ ನೆಟ್ಟು ಬೆಳೆಸಬೇಕು ಎನ್ನುವ ನಿಯಮವಿದೆ. ಅದನ್ನು ಗಾಳಿಗೆ ತೂರಿದ್ದಾರೆ. ಸರಕಾರದ ಅವಿವೇಕತನದ ಕಾಮಗಾರಿ, ಯೋಜನೆಗಳಿಂದ ಮಳೆಗಾಲದಲ್ಲಿ ಪ್ರವಾಹ, ಮುಳುಗಡೆ, ಪಶ್ಚಿಮ ಘಟ್ಟಗಳಲ್ಲಿ ಭೂ ಕುಸಿತ ಸಂಭವಿಸುತ್ತಿದೆ".
- ದಿನೇಶ್ ಹೊಳ್ಳ, ಪರಿಸರ ಹೋರಾಟಗಾರರು, ಚಾರಣಿಗ.







