ಗ್ರಾಪಂಗಳ ಕರ, ಶುಲ್ಕಗಳನ್ನು ನಗದು ರಹಿತ ಪಾವತಿಸಿ: ಉಡುಪಿ ಸಿಇಓ ಪ್ರಸನ್ನ

ಉಡುಪಿ, ಅ.1: ಸಾರ್ವಜನಿಕರು ಗ್ರಾಮ ಪಂಚಾಯತ್‌ಗಳಿಗೆ ನೀಡುವ ವಿವಿಧ ತೆರಿಗೆ, ಶುಲ್ಕ ಸೇರಿದಂತೆ ಎಲ್ಲಾ ಪಾವತಿಗಳನ್ನು ಇಂದಿನಿಂದ ಕಡ್ಡಾಯ ವಾಗಿ ಡಿಜಿಟಲ್ ವ್ಯವಸ್ಥೆಯ ಮೂಲಕ ಪಾವತಿಸಬೇಕೆಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದ್ದಾರೆ.
ಉಡುಪಿ ತಾಲೂಕಿನ ಕಲ್ಯಾಣಪುರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮಪಂಚಾಯತ್‌ಗಳಲ್ಲಿ ನಗದು ರಹಿತ ವ್ಯವಹಾರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಜನ ಸಾಮಾನ್ಯರು ವಿವಿಧ ತೆರಿಗೆಗಳು, ಶುಲ್ಕಗಳು, ದರಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ನಗದು ರಹಿತವಾಗಿ ಪಾವತಿಸುವ ವ್ಯವಸ್ಥೆ ಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಎಲ್ಲಾ ಪಾವತಿಗಳನ್ನು ನಗದು ರೂಪದಲ್ಲಿ ನೀಡದೇ ಡಿಜಿಟಲ್ ವ್ಯವಸ್ಥೆಗಳ ಮೂಲಕ ಪಾವತಿಸುವುದರೊಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪೋನ್ ಪೇ, ಪೇಟಿಯಂ: ಈಗಾಗಲೇ ಗ್ರಾಮ ಪಂಚಾಯತ್‌ಗಳಿಗೆ ಇ-ಪೇ, ಫೋನ್ ಪೇ, ಪೇಟಿಎಂ, ಭೀಮ್, ರೂಪಿಯಾ ಮೊದಲಾದವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿಕೊಂಡು ಡಿಜಿಟಲ್ ವ್ಯವಸ್ಥೆಯ ಮೂಲಕ ಪಾವತಿಗಳನ್ನು ಸ್ವೀಕರಿಸಲು ಸೂಚಿಸಲಾಗಿದೆ.ಅಲ್ಲದೇ ಸ್ವೈಪ್ ಯಂತ್ರಗಳನ್ನು ಸಹ ಗ್ರಾಮಪಂಚಾಯತ್‌ಗಳಿಗೆ ನೀಡಲಾಗಿದ್ದು, ಜನರು ಇದರ ಮೂಲಕವೂ ಪಾವತಿಸಬಹುದಾಗಿದೆ ಎಂದರು.
ಸರಕಾರ ಈಗಾಗಲೇ ನಗದು ರಹಿತ ಡಿಜಿಟಲ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ಗಳಲ್ಲಿಯೂ ಕಡ್ಡಾಯವಾಗಿ ಡಿಜಿಟಲ್ ವ್ಯವಸ್ಥೆಗಳ ಮೂಲಕ ಸಾರ್ವಜನಿಕರಿಂದ ಹಣ ಸ್ವೀಕರಿಸುವುದು ಹಾಗೂ ಪಾವತಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ಸಾರ್ವಜನಿಕರಿಗೂ ಹಾಗೂ ಗ್ರಾಮ ಪಂಚಾಯತಿಗಳಿಗೂ ಅನುಕೂಲವಾಗುವುದರ ಜೊತೆಗೆ ಆರ್ಥಿಕ ವ್ಯವಹಾರವು ಹೆಚ್ಚು ಪಾರದರ್ಶಕ ಗೊಳ್ಳುತ್ತದೆ ಎಂದರು.
ನೆಟ್‌ವರ್ಕ್‌ಗೆ ವ್ಯವಸ್ಥೆ: ಸಾರ್ವಜನಿಕರು ಸುರಕ್ಷತೆಯೊಂದಿಗೆ ಡಿಜಿಟಲ್ ಪಾವತಿಗೆ ಹೆಚ್ಚು ಒತ್ತು ನೀಡಬೇಕು ಎಂದ ಅವರು, ಜಿಲ್ಲೆಯ 155 ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನಗಳಲ್ಲಿ ಸದಾ ನೆಟ್‌ವರ್ಕ್ ಸೌಲಭ್ಯ ಇರುವ ಹಾಗೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದರು.
ಗ್ರಾಪಂಗಳು ಯಾವುದೇ ಸೇವಾ ಶುಲ್ಕಗಳಿಲ್ಲದೇ ಡಿಜಿಟಲ್ ಹಣ ಪಾವತಿಗೆ ಹಾಗೂ ಡಿಜಿಟಲ್ ಪಾವತಿಗೆ ಅನುಕೂಲವಾಗುವಂತೆ ಡಿಜಿಟಲ್ ಉಪಕರಣ ಗಳನ್ನು ಉಚಿತವಾಗಿ ಒದಗಿಸಿದ ಕೆನರಾಬ್ಯಾಂಕ್‌ಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಲ್ಯಾಣಪುರ ಗ್ರಾಪಂ ಅಧ್ಯಕ್ಷ ಕೃಷ್ಣ ದೇವಾಡಿಗ, ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ರಾಮ ನಾಯ್ಕ, ರೀಜಿನಲ್ ಮ್ಯಾನೇಜರ್ ಲೀನಾ ಪಿಂಟೋ, ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಸಂಜೀವ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೀತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಕಲ್ಯಾಣಪುರ ಗ್ರಾಪಂ ಕಚೇರಿ, ಇಲ್ಲಿನ ಘನ ತ್ಯಾಜ್ಯ ವಿಲೇವಾರಿ ಘಟಕ, ಸಂಜೀವಿನಿ ಸಂಘದ ಕಚೇರಿಗೆ ಭೇಟಿ ನೀಡಿದ ಸಿಇಓ ಪ್ರಸನ್ನ, ಇಲ್ಲಿನ ಅಗಸನಕೆರೆ ಅಭಿವೃದ್ಧಿ ಪಡಿಸುವ ಕುರಿತು ಪರಿಶೀಲನೆ ನಡೆಸಿದರು.







