ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿಗೆ ಆಯ್ಕೆ

ಮಣಿಮುಂಡ
ಮಂಗಳೂರು, ಅ.1: ಕಡಬ ಸಂಸ್ಮರಣಾ ಸಮಿತಿ ರಥಬೀದಿ ಮಂಗಳೂರು ವತಿಯಿಂದ ನೀಡುವ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ 2022ಕ್ಕೆ ಹಿರಿಯ ಮದ್ದಳೆಗಾರ ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ ಆಯ್ಕೆಯಾಗಿದ್ದಾರೆ.
ತೆಂಕುತಿಟ್ಟಿನ ಹೆಸರಾಂತ ಹಿಮ್ಮೇಳವಾದಕ ಕಡಬ ನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಕಡಬ ವಿನಯ ಆಚಾರ್ಯರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದೆ. ಅ.೯ರಂದು ಮಧ್ಯಾಹ್ನ ೧:೪೫ರಿಂದ ಗುರುಪುರ ಕೈಕಂಬದ ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ತೃತೀಯ ವರ್ಷದ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಧರ್ಮೋ ರಕ್ಷತಿ ರಕ್ಷಿತಃ’ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ.
*ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ: ಮೂಡಿಗೆರೆ ತಾಲೂಕಿನ ಬಣಕಲ್ ಸುಬ್ಬಣ್ಣ ಶಾಸ್ತ್ರೀ ಮತ್ತು ರಮಾದೇವಿ ದಂಪತಿ ಪುತ್ರನಾಗಿ ಜನಿಸಿದ ಸುಬ್ರಹ್ಮಣ್ಯ ಶಾಸ್ತ್ರಿ ೭ನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾದ ಕೆ. ಗೋವಿಂದ ಭಟ್ಟರಿಂದ ನಾಟ್ಯ ಕಲಿತು ವೇಷಧಾರಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಧರ್ಮಸ್ಥಳ ಹಾಗೂ ಸುಂಕದಕಟ್ಟೆ ಮೇಳದಲ್ಲಿ ನಿತ್ಯ ವೇಷಗಳನ್ನು ಮಾಡುತ್ತಿರುವಾಗಲೇ ಹಿಮ್ಮೇಳದತ್ತ ಆಕರ್ಷಿತರಾಗಿ ಬಳಿಕ ನಿಡ್ಲೆ ನರಸಿಂಹ ಭಟ್ಟರಿಂದ ಚೆಂಡೆ ಮದ್ದಲೆ ವಾದನವನ್ನು ಅಭ್ಯಸಿಸಿ ಕಡತೋಕ ಮಂಜುನಾಥ ಭಾಗವತರು ಹಾಗೂ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಸಮರ್ಥ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಮತ್ತು ಪುತ್ತೂರು ಮೇಳದಲ್ಲಿ ಸೇವೆಗೈದವರು. ಬಳಿಕ ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಸುಮಾರು ಮೂರೂವರೆ ದಶಕಗಳ ಕಾಲ ತಿರುಗಾಟದ ನಡೆಸಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಲ್ಲಿ ನಿರಂತರ ೧೨ ವರ್ಷಗಳ ಕಾಲ ಸೇವೆ ನಡೆಸಿದ್ದಾರೆ. ಇದೀಗ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿ ಗಿರೀಶ್ ಕಾವೂರು ತಿಳಿಸಿದ್ದಾರೆ.







