ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಆಯ್ಕೆ

ಕಂದಾವರ ರಘುರಾಮ ಶೆಟ್ಟಿ
ಮಂಗಳೂರು, ಅ.1: ಜಾಗತಿಕ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ ಹಾಗೂ ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
ಪ್ರೊ.ಜಿ.ಆರ್.ರೈ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಪಳ್ಳಿ ಕಿಶನ್ ಹೆಗ್ಡೆ ಅವರನ್ನೊಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು 25,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಅಕ್ಟೋಬರ್ 8 ರಂದು ಮಂಗಳೂರಿನಲ್ಲಿ ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಎ.ಜೆ.ಶೆಟ್ಟಿಯ ಅಧ್ಯಕ್ಷತೆಯಲ್ಲಿ ಜರಗುವ 26ನೇ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
*ಕರ್ಕಿ ಸದಿಯಣ್ಣ ಶೆಟ್ಟಿ-ಕಂದಾವರ ಪುಟ್ಟಮ್ಮ ಶೆಟ್ಟಿ ದಂಪತಿಯ ಪುತ್ರನಾಗಿ 1936ರ ಮಾರ್ಚ್ 12ರಂದು ಜನಿಸಿದ ರಘುರಾಮ ಶೆಟ್ಟಿ ಕಂಡ್ಲೂರು ನೇತಾಜಿ ಹಿ.ಪ್ರಾ.ಶಾಲೆಯಲ್ಲಿ 35 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಯಕ್ಷಗಾನ ಹಾಗೂ ನಾಟಕ ಕಲಾವಿದರಾಗಿದ್ದ ಅವರು 7 ನಾಟಕಗಳು, 37 ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ.
ಕವಿ ಮುದ್ದಣ ಪ್ರಶಸ್ತಿ, ಸೀತಾನದಿ ಪ್ರಶಸ್ತಿ, ಯಕ್ಷ ಸಾಹಿತ್ಯ ಶ್ರೀ, ಪಟ್ಲ ಫೌಂಡೇಶನ್ ಪ್ರಶಸ್ತಿ, ಜಾನಪದ ಶ್ರೀ, ಕರಾವಳಿ ರತ್ನ, ಸಾಮಗ ಪ್ರಶಸ್ತಿ ಸಹಿತ 20ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಜೀವನ ಸಾಧನೆ ಬಗ್ಗೆ ‘ಕೆಂದಾವರೆ’ ಎಂಬ ಅಭಿನಂದನ ಗ್ರಂಥ ಸಮರ್ಪಣೆಯಾಗಿದೆ.







