ಕೋಡಿಕಲ್: ಕನ್ನಡ ಸಹಿತ ತುಳು ನಾಮಫಲಕ ಅನಾವರಣ

ಮಂಗಳೂರು, ಅ.1: ಕೋಡಿಕಲ್‌ನ ಹತ್ತು ಅಡ್ಡ ರಸ್ತೆ, ಮೂರು ಮುಖ್ಯ ರಸ್ತೆಗೆ ಸ್ಥಳೀಯ ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್ ಅವರು ತನ್ನ ಅನುದಾನದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಥಮವಾಗಿ ಅಳವಡಿಸಿದ ‘ಕನ್ನಡ ಸಹಿತ ತುಳು ನಾಮಫಲಕ’ವನ್ನು ಶಾಸಕ ಡಾ.ಭರತ್ ಶೆಟ್ಟಿ ಶನಿವಾರ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು ತುಳು ಲಿಪಿಯ ಮಾನ್ಯತೆಗೆ ಸಚಿವರು, ಶಾಸಕರು, ಸಂಸದರ ಪ್ರಯತ್ನ ನಿರಂತ ರವಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಕಾರ್ಯವೂ ನಡೆಯುತ್ತಿದೆ ಎಂದರು.
ತುಳು ಸಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಾತನಾಡಿ, ಕನ್ನಡವನ್ನು ತುಳುವರು ವಿರೋಧಿಸುತ್ತಾರೆ ಎಂಬ ಭಾವನೆಯಲ್ಲಿ ಸತ್ಯಾಂಶವಿಲ್ಲ. ತುಳುವರು ಕನ್ನಡವನ್ನು ಅಭಿಮಾನದಿಂದ ಗೌರವಿಸಿ ಕೊಂಡೇ ತುಳುವನ್ನು ಆಡು ಭಾಷೆಯ ಮಾನ್ಯತೆಗೆ ಪ್ರಯತ್ನ ನಡೆಸಲಾಗುತ್ತಿದ್ದೆ ಎಂದರು.
ಕಾರ್ಯಕ್ರಮದಲ್ಲಿ ಮನಪಾ ಸದಸ್ಯ, ಕಿರಣ್ ಕುಮಾರ್ ಕೋಡಿಕಲ್ ಮನೋಜ್ ಕುಮಾರ್, ನಿಕಟಪೂರ್ವ ಉಪಮೇಯರ್ ಸುಮಂಗಳಾ, ಹಿರಿಯರಾದ ಗೋಪಾಲ್ ಕೋಟ್ಯಾನ್, ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ತುಳುನಾಡು ಕುಡ್ಲ ಅಧ್ಯಕ್ಷ ಅಶ್ವಥ್ ತುಳುವೆ, ತುಳುವೆರ್ ಕುಡ್ಲ ಅಧ್ಯಕ್ಷ ಪ್ರತೀಕ್ ಪೂಜಾರಿ, ಪ್ರಮುಖರಾದ ಉಮೇಶ್ ಮಲರಾಯಸಾನ, ಹರಿಪ್ರಸಾದ್ ಶೆಟ್ಟಿ, ಸೀತಾರಾಮ್ ದಂಬೆಲ್ ಉಪಸ್ಥಿತರಿದ್ದರು.