ಅ.3: ಬ್ಯಾರಿ ಭಾಷಾ ದಿನಾಚರಣೆಯ ದಶಮಾನೋತ್ಸವ ಕಾರ್ಯಕ್ರಮ

ಮಂಗಳೂರು, ಅ.1:ಬ್ಯಾರಿ ಭಾಷಿಗರ ಕೇಳಿಕೆಯನ್ನು ಮನ್ನಿಸಿ ಬ್ಯಾರಿ ಭಾಷೆಗೆ ಸರಕಾರಿ ಮನ್ನಣೆ ನೀಡಿ 2007ನೆ ಇಸವಿಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯನ್ನು ರಾಜ್ಯ ಗೆಜೆಟ್‌ನಲ್ಲಿ ಕರ್ನಾಟಕ ಸರಕಾರವು ಘೋಷಿಸಿದ ದಿನಾಂಕವಾದ ಅಕ್ಟೋಬರ್ 3ನ್ನು 2013ನೇ ಇಸವಿಯಿಂದಲೂ ಬ್ಯಾರಿ ಭಾಷಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆ ಪ್ರಯುಕ್ತ ಈ ವರ್ಷ ಅ.3ರಂದು ಬೆಳಗ್ಗೆ 9:30ಕ್ಕೆ ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಮಂಗಳೂರು ಇದರ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯ ದಶಮಾನೋತ್ಸವನ್ನು ನಗರದ ಹಂಪನಕಟ್ಟೆಯ ಜಿ.ಎಚ್.ಎಸ್. ರಸ್ತೆಯ ತಾರಾ ಕ್ಲಿನಿಕ್ ಮುಂದಿರುವ ಆಶಿರ್ವಾದ್ ಹೋಟೆಲ್ ಗಾರ್ಡನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಬ್ಯಾರಿ ಮುಖಂಡ ಇನಾಯತ್ ಅಲಿ ಮುಲ್ಕಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ, ತೆರಿಗೆ ಸಲಹೆಗಾರ ಪುಂಡಲೀಕಾಕ್ಷ ಯು., ಪತ್ರಕರ್ತ ಹಂಝ ಮಲಾರ್, ‘ಬ್ಯಾರಿವಾರ್ತೆ’ಯ ಸಂಪಾದಕ ಬಶೀರ್ ಬೈಕಂಪಾಡಿ, ಹೈಕೋರ್ಟ್ ನ್ಯಾಯವಾದಿ ರಿಯಾಝ್ ಬಂಟ್ವಾಳ, ಬ್ಯಾರಿ ಭಾಷಾಭಿಮಾನಿ ಪಿ.ವಿ. ಸತ್ಯಪಾಲ್, ಉಪನ್ಯಾಸಕಿ ಸಿಹಾನಾ ಬಿ.ಎಂ. ಉಳ್ಳಾಲ ಭಾಗವಹಿಸಲಿದ್ದಾರೆ.
ಭಾಷಾ ದಿನಾಚರಣೆಯ ಪ್ರಯುಕ್ತ ನಡೆಸಲಾದ ಬ್ಯಾರಿ ಪ್ರಬಂಧ, ಬ್ಯಾರಿ ಒಗಟು, ಬ್ಯಾರಿ ಆಶು ಭಾಷಣ ಸ್ಪರ್ಧೆಯ ಹಾಗೂ ಸಮಾರಂಭದ ದಿನ ಸಭಿಕರಿಗೆ ಏರ್ಪಡಿಸಲಾಗುವ ಬ್ಯಾರಿ ಕ್ವಿಝ್ ಸ್ಪರ್ಧೆಯ ವಿಜೇತರಿಗೆ ಅ.3ರಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಅಲ್ಲದೆ ಬ್ಯಾರಿ ಹಾಡುಗಳ ಮನೋರಂಜನೆ ಯನ್ನೂ ಏರ್ಪಡಿಸಲಾಗಿದೆ ಎಂದು ಅಖಿಲ ಭಾರತ ಬ್ಯಾರಿ ಪರಿಷತ್‌ನ ಅಧ್ಯಕ್ಷ ಜಿ.ಎಂ. ಶಾಹುಲ್ ಹಮೀದ್ ಮೆಟ್ರೋ ಪ್ರಕಟನೆಯಲ್ಲಿ ತಿಳಿಸಿದ್ದಾರೆ.