ಲಕ್ನೋ ರಾಮಲೀಲಾದಲ್ಲಿ 300 ವರ್ಷದ ಸಂಪ್ರದಾಯಕ್ಕೆ ಇತಿಶ್ರೀ: ಏಕೆ ಗೊತ್ತೇ ?

ಲಕ್ನೋ: ಇಲ್ಲಿನ ಐಷ್‍ಬಾಗ್ ರಾಮಲೀಲಾ ಉತ್ಸವದಲ್ಲಿ ರಾವಣನ ಪ್ರತಿಕೃತಿ ಜತೆಗೆ ಕುಂಭಕರ್ಣ ಮತ್ತು ಮೇಘನಾದ ಪ್ರತಿಕೃತಿಗಳನ್ನು ದಹಿಸುವ 300 ವರ್ಷಗಳ ಸಂಪ್ರದಾಯಕ್ಕೆ ಇತಿಶ್ರೀ ಹಾಡಲಾಗುತ್ತದೆ. ಈ ಸಂಬಂಧ ರಾಮಲೀಲಾ ಸಮಿತಿ ನಿರ್ಧಾರ ಕೈಗೊಂಡಿದೆ.
"ರಾಮನ ವಿರುದ್ಧ ಯುದ್ಧ ಮಾಡದಂತೆ ಕುಂಭಕರ್ಣ ಹಾಗೂ ಮೇಘನಾದ ಮೊದಲು ರಾವಣನ ಮನವೊಲಿಸುವ ಪ್ರಯತ್ನ ಮಾಡಿದ್ದರು. ರಾಕ್ಷಸರಾಜ ಅವರ ಸಲಹೆಯನ್ನು ತಿರಸ್ಕರಿಸಿದ ಬಳಿಕ ರಾಮನ ವಿರುದ್ಧ ಯುದ್ಧಕ್ಕೆ ಮುಂದಾದರು ಎಂಬ ಉಲ್ಲೇಖ ರಾಮಾಯಣದಲ್ಲಿದೆ" ಎಂದು ಸಂಘಟಕರು ಕಾರಣ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾವಣದ ಪ್ರತಿಕೃತಿ ದಹನದ ವೇಳೆ ಕುಂಭಕರ್ಣ ಮತ್ತು ಮೆಘಂದ ಪ್ರತಿಕೃತಿಗಳನ್ನು ಸುಡದಂತೆ ಐಷ್‍ಬಾಗ್ ದಸರಾ ಮತ್ತು ರಾಮಲೀಲಾ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಅಗರ್‍ವಾಲ್ ಹಾಗೂ ಕಾರ್ಯದರ್ಶಿ ಆದಿತ್ಯ ದ್ವಿವೇದಿ ಪ್ರಸ್ತಾಪ ಮುಂದಿಟ್ಟಿದ್ದರು. ಆದರೆ ಇದು 300 ವರ್ಷಗಳ ಸಂಪ್ರದಾಯ ಎಂಬ ಕಾರಣಕ್ಕೆ ಸಮಿತಿಯ ಇತರ ಸದಸ್ಯರು ಇದನ್ನು ವಿರೋಧಿಸಿದ್ದರು.
"ರಾಮಚರಿತ ಮತ್ತು ರಾಮಾಯಣವನ್ನು ಆಳವಾಗಿ ಅಧ್ಯಯನ ಮಾಡಿದಾಗ, ರಾಮ ವಿಷ್ಣುವಿನ ಅವತಾರ; ಆತನ ವಿರುದ್ಧ ಯುದ್ಧ ಬೇಡ ಎಂದು ರಾವಣನ ಮಗ ಮೇಘನಾದ ಹೇಳಿದ್ದು ತಿಳಿದು ಬರುತ್ತದೆ. ಇನ್ನೊಂದೆಡೆ ರಾವಣ ಅಪಹರಿಸಿ ಲಂಕೆಗೆ ಕರೆತಂದ ಸೀತಾಮಾತೆ ಜಗದಂಬೆ; ಆಕೆಯನ್ನು ಬಿಡದಿದ್ದರೆ ನಿನ್ನ ಜೀವ ಸಹಿತ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ರಾವಣನಿಗೆ ಸಲಹೆ ಮಾಡಿದ ಉಲ್ಲೇಖ ಇದೆ. ರಾವಣ ಇದನ್ನು ನಿರ್ಲಕ್ಷಿಸಿ ಯುದ್ಧಕ್ಕೆ ಆದೇಶ ನೀಡಿದ. ಆದ್ದರಿಂದ ಅವರ ಪ್ರತಿಕೃತಿ ದಹನ ತಪ್ಪು" ಎಂದು ದ್ವಿವೇದಿ ಪ್ರತಿಪಾದಿಸಿದರು.
ಈ ಬಗ್ಗೆ ವ್ಯಾಪಕ ಚರ್ಚೆ ಬಳಿಕ ಎಲ್ಲ ಸದಸ್ಯರು ಈ ಸಂಪ್ರದಾಯ ಕೈಬಿಡಲು ಒಪ್ಪಿಕೊಂಡರು ಎಂದು ಅಗರ್‍ವಾಲ್ ಸ್ಪಷ್ಟಪಡಿಸಿರುವುದಾಗಿ timesofindia.com ವರದಿ ಮಾಡಿದೆ.







