ಮಂಗಳೂರು: ಪಾದಚಾರಿ ಮಾರ್ಗ, ರಾಜಾಜಿ ಉದ್ಯಾವನದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಮಂಗಳೂರು, ಅ.2: ಸ್ಮಾರ್ಟ್ ಸಿಟಿ ಲಿ. ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದ ಬಳಿ ಆರಂಭಿಸಲಾದ ಪಾದಚಾರಿ ಮಾರ್ಗ ಹಾಗೂ ರಾಜಾಜಿ ಉದ್ಯಾವನದ ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ನೆರವೇರಿಸಿದರು.
ಶಾಸಕ ವೇದವ್ಯಾಸ್ ಕಾಮತ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮೇಯರ್ ಜಯಾನಂದ ಅಂಚನ್ ಮುಖ್ಯ ಅತಿಥಿಗಳಾಗಿದ್ದರು.
ಉಪಮೇಯರ್ ಪೂರ್ಣಿಮಾ, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ದಿವಾಕರ ಪಾಂಡೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಶಕೀಲಾ ಕಾವ, ಹೇಮಲತಾ ರಘು ಸಾಲ್ಯಾನ್, ನಯನಾ ಕೋಟ್ಯಾನ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಮುಂತಾದವರು ಉಪಸ್ಥಿತರಿದ್ದರು.
ಶಾಸಕ ವೇದವ್ಯಾಸ ಕಾಮತ್ ಅವರು ಸುದ್ದಿಗಾರರ ಜತೆಗೆ ಮಾತನಾಡಿ, ‘ಪುರಭವನದ ಮುಂಭಾಗವಿದ್ದ ಪಾರ್ಕ್ ಸುಂದರ ಹಾಗೂ ಆಕರ್ಷಣೀಯವಾಗಿ ಈಗ ರೂಪುಗೊಂಡಿದೆ. ಬಯಲು ರಂಗ ಮಂದಿರ, ಗಾಂಧಿ ಪ್ರತಿಮೆ ಸಹಿತ ಹಲವು ವಿಶೇಷತೆಗಳು ಪಾರ್ಕ್‌ನಲ್ಲಿವೆ. ಇದೇ ವ್ಯಾಪ್ತಿಯಲ್ಲಿ ಪಾದಚಾರಿ ಅಂಡರ್ ಪಾಸ್ (ಪೆಡೆಸ್ಟ್ರಿಯನ್ ಪ್ಲಾಜಾ) ಕಾಮಗಾರಿ ಕೂಡ ನಿರ್ಮಿಸಲಾಗಿದೆ. ಅಂಡರ್ ಪಾಸ್‌ನ ಎರಡೂ ಕಡೆಯಲ್ಲಿ ಮೇಲೆ ಬರಲು/ಹೋಗಲು ಅವಕಾಶ ನೀಡಲಾಗಿದೆ. ಮಂಗಳೂರಿನ ಸುಂದರೀಕರಣಕ್ಕೆ ಇದು ಹೊಸ ಭಾಷ್ಯ ಬರೆಯಲಿದೆ’ ಎಂದರು.