ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಹಾತ್ಮ ಗಾಂಧಿಜೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ರವಿವಾರ ಬೆಳಿಗ್ಗೆ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕೊಡಿಜಾಲ್, ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಗುಣಗಾನ ಮಾಡಿದರು. ಗಾಂಧಿಜೀಯವರು ಅಹಿಂಸೆಯನ್ನು ಪ್ರತಿಪಾದಿಸಿ, ಸಹೋದರತೆ, ಸಾಮರಸ್ಯ, ಸರ್ವಧರ್ಮ ಸಮಭಾವದಿಂದ ಈ ದೇಶಕ್ಕಾಗಿ ದುಡಿದು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮಹಾತ್ಮರಾದರು. ಭಾರತ ಮಾತ್ರವಲ್ಲ, ಇಡೀ ಜಗತ್ತು ಗಾಂಧಿಜೀಯವರನ್ನು ಮಹಾತ್ಮ ಎಂದು ಒಪ್ಪಿಕೊಂಡಿದೆ ಎಂದು ಧ್ವಜರೋಹಣ ಗೈದು, ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಬಾವ ಚಿತ್ರಕ್ಕೆ ಹೂ ಹಾಕಿ ಅವರು ಮಾತನಾಡಿದರು.
ಗಾಂಧಿಜೀ ಅಹಿಂಸೆಯ ಪ್ರತಿರೂಪವಾದರೆ, ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರಳತೆಯ ಪ್ರತಿರೂಪ ಎಂದು ಇಬ್ರಾಹಿಂ ಕೋಡಿಜಾಲ್ ಬಣ್ಣಿಸಿದರು. ಭಾರತ ಎಂಬ ಬೃಹತ್ ದೇಶದ ಪ್ರಧಾನಿಯಾಗಿದ್ದರೂ ಶಾಸ್ತ್ರಿಯವರ ಬಳಿ ಸ್ವಂತದಾದ ಒಂದು ಕಾರು ಇರಲಿಲ್ಲ. ಅವರಿಗೆ ಅಧಿಕಾರ ದಾಹವೂ ಇರಲಿಲ್ಲ. ರೈಲು ಅವಘಡವೊಂದಕ್ಕೆ ಸಂಬಂಧಿಸಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದರು. ಇಂತಹ ನಾಯಕರೇ ನಮಗೆ ಮಾದರಿಯಾಗಬೇಕು ಎಂದು ಹೇಳಿದರು.
ಗಾಂಧೀಜಿ ಮತ್ತು ಶಾಸ್ತ್ರಿಜೀ ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಅವರು ಮುನ್ನಡೆಸಿದ ಪಕ್ಷದಲ್ಲಿ ನಾವು ಕೂಡ ಇದ್ದು ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಇಬ್ರಾಹಿಂ ಕೊಡಿಜಾಲ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸೇವಾದಳ ಮುಖ್ಯಸ್ಥರಾದ ಜೋಕಿಮ್ ಡಿ ಸೋಜಾ ಸ್ವಾಗತಿಸಿದರು, ಸಂರ್ಭದಲ್ಲಿ ಸಾಹುಲ್ ಹಮೀದ್ ಕೆ ಕೆ, ನಾಗೇಶ್ ಶೆಟ್ಟಿ ತೊಕ್ಕೊಟ್ಟು, ಸಬೀರ್ ಎಸ್, ನಝೀರ್ ಬಜಾಲ್, ರಾಜೇಶ್ ದೇವಾಡಿಗ ಕಾವೂರ್, ಅನಿತಾ, ರೋನಿ ಡಿ ಸೋಜಾ, ನಾಗೇಶ್ , ನವೀನ್ ಪೂಜಾರಿ, ಕೋಟೆಕಾರ್, ಮುಹಮ್ಮದ್ ಬಪ್ಪಲಿಗ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ನಾಗವೇಣಿ ಯೆಯ್ಯಾಡಿ ವಂದಿಸಿದರು.