ಗಾಂಧೀಜಿ, ಶಾಸ್ತ್ರಿ ದೇಶದ ಪ್ರೇರಕ ಶಕ್ತಿ: ಶಾಸಕ ಸಂಜೀವ ಮಠಂದೂರು
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗಾಂಧಿ ಜಯಂತಿ ಆಚರಣೆ

ಪುತ್ತೂರು: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ದೇಶದ ಪ್ರೇರಕ ಶಕ್ತಿಯಾಗಿದ್ದು, ಅವರ ಜನ್ಮ ದಿನಾಚರಣೆಯೊಂದಿಗೆ ಅವರ ಚಿಂತನೆಗಳು ನಮಗೆಲ್ಲರಿಗೂ ಆದರ್ಶವಾಗಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ರವಿವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯಗೊಂಡ ದೇಶಕ್ಕೆ ಹಿರಿಯರು ನೀಡಿದ ಪವಿತ್ರ ಸಂವಿಧಾನದ ಆಶಯಗಳನ್ನು ನಾವು ಹೇಗೆ ಸಾಕಾರಗೊಳಿಸುತ್ತೇವೆ ಎಂಬುದನ್ನು ಈ ಸಂದರ್ಭದಲ್ಲಿ ಯೋಚಿಸಬೇಕಾಗಿದೆ. ದೀನರು, ದಲಿತರು, ಅಸಹಾಯಕರ ಸಂಕಷ್ಟಗಳಿಗೆ ಸ್ಪಂದಿಸುವುದೂ ಮುಖ್ಯ. ಗಾಂಧೀಜಿಯವರು ಕಂಡ ಸ್ವಚ್ಛ, ದುಶ್ಚಟಮುಕ್ತ ರಾಮರಾಜ್ಯದ ಕನಸನ್ನು ನಾವು ನನಸು ಮಾಡಬೇಕು ಎಂದು ಮಠಂದೂರು ಹೇಳಿದರು.
ಸಂಸ್ಮರಣಾ ಜ್ಯೋತಿ ಪ್ರಜ್ವಲನೆ ಮಾಡಿದ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ ಅಹಿಂಸಾ ಹೋರಾಟದ ಪರಿಣಾಮಕಾರಿ ಅಸ್ತ್ರದ ಮೂಲಕ ಜನತೆಯ ಮನಸ್ಸಿನ ಕೆಟ್ಟತನವನ್ನು ನಾಶ ಮಾಡಿದ ಗಾಂಧೀ ಜಗತ್ತಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೊಸ ಮನ್ವಂತರ ಹುಟ್ಟು ಹಾಕಿದ ವಿಶ್ವದ ಮಹಾನ್ ಚೇತನ. ಸರಳ ವ್ಯಕ್ತಿತ್ವದೊಂದಿಗೆ ಪ್ರಧಾನಿ ಹುದ್ದೆಯನ್ನೂ ನಿಭಾಯಿಸಿದ ಶಾಸ್ತ್ರೀ ಅವರು ಜೈಜವಾನ್, ಜೈಕಿಸಾನ್ ಘೋಷಗಳ ಮೂಲಕ ಇವರಿಬ್ಬರ ಸ್ಥಾನಕ್ಕೆ ಅತ್ಯಂತ ಮಹತ್ವ ನೀಡಿದವರು ಎಂದರು.
ವೇದಿಕೆಯಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ ಉಪಸ್ಥಿತರಿದ್ದರು. ತಾ.ಪಂ. ನಿಕಟರ್ಪರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ವಿವಿಧ ಇಲಾಖೆಗಳ ಅಧಿಕಾರಿಗಳಾದ ಶೈಲಜಾ ಭಟ್, ಡಾ. ದೀಪಕ್, ಸುನಿಲ್, ಸುಂದರ ಗೌಡ, ಮಹೇಶ್, ಕೃಷ್ಣ, ವಿದ್ಯಾರಾಣಿ ಸೇರಿದಂತೆ ತಾಲೂಕು ಸೌಧದ ಅಧಿಕಾರಿಗಳು, ಸಿಬಂದಿ ಉಪಸ್ಥಿತರಿದ್ದರು.
ಕಂದಾಯ ಇಲಾಖೆಯ ಸಿಬ್ಬಂದಿ ದಯಾನಂದ ಡಿ.ಟಿ. ಸ್ವಾಗತಿಸಿದರು. ಉಪ ತಹಶೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಬಳಿಕ ತಾಲೂಕು ಸೌಧದ ಅಧಿಕಾರಿಗಳು ಹಾಗೂ ಸಿಬಂದಿ ಮಿನಿ ವಿಧಾನಸೌಧದ ಕಚೇರಿ ಹಾಗೂ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಿದರು.







