ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಗೊಳಿಸಲಿರುವ ಕೇಂದ್ರ ಸರ್ಕಾರ?

ಹೊಸದಿಲ್ಲಿ: ಹಿಂದಿನ ಯುಪಿಎ ಸರ್ಕಾರ 2006 ರಲ್ಲಿ ರಚಿಸಿದ್ದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಅದನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ವಿಲೀನಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದು Deccan Herald ವರದಿ ಮಾಡಿದೆ.
ವಿಲೀನಗೊಂಡರೂ ಸಚಿವಾಲಯದ ಎಲ್ಲಾ ಯೋಜನೆಗಳು ಮುಂದುವರಿಯಲಿವೆ ಎಂದೂ ಹೇಳಲಾಗಿದೆ. ಆದರೆ ಈ ವರದಿಗಳ ಕುರಿತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲದ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
"ಅಲ್ಪಸಂಖ್ಯಾತ ವ್ಯವಹಾರಗಳಿಗೆ ಪ್ರತ್ಯೇಕ ಸಚಿವಾಲಯದ ಅಗತ್ಯವಿಲ್ಲ ಎಂದು ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಭಿಪ್ರಾಯ ಹೊಂದಿದೆ ಹಾಗೂ ಯುಪಿಎ ಸರ್ಕಾರದ ಓಲೈಕೆ ನೀತಿಯ ಭಾಗವಾಗಿ ಈ ಸಚಿವಾಲಯವನ್ನು ರಚಿಸಲಾಗಿತ್ತು" ಎಂದೂ ಕೆಲ ಮೂಲಗಳು ಹೇಳಿವೆ.
ಈ ಕುರಿತ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯಸಭಾ ಸಂಸದ ಸಯ್ಯದ್ ನಸೀರ್ ಹುಸೈನ್, ಇದು ಸಮಾಜವನ್ನು ಧ್ರುವೀಕರಿಸುವತ್ತ ಬಿಜೆಪಿಯ ಇನ್ನೊಂದು ಪ್ರಯತ್ನ ಎಂದು ಹೇಳಿದ್ದಾರೆ.
"ಅಲ್ಪಸಂಖ್ಯಾತರ ಅಭ್ಯುದಯಕ್ಕಾಗಿ ಯೋಜನೆಗಳೊಂದಿಗೆ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಗಿತ್ತು ಆದರೆ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧದ ಪ್ರತಿ ಅವಕಾಶವನ್ನು ತನ್ನ ರಾಜಕೀಯ ಲಾಭಗಳಿಗಾಗಿ ಬಳಸುತ್ತಿದೆ" ಎಂದು ಅವರು ಹೇಳಿದ್ದಾರೆ.
"ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನು ರದ್ದುಗೊಳಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇಂತಹ ಕ್ರಮದ ಬದಲು ಈ ಸಚಿವಾಲಯಕ್ಕೆ ಹೆಚ್ಚಿನ ಅನುದಾನವೊದಗಿಸಿ ಅದರ ಬಲವರ್ಧನೆಗೆ ಕ್ರಮಕೈಗೊಳ್ಳಬೇಕು" ಎಂದು ಅವರು ಹೇಳಿದರು.
ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜ್ಯಸಭಾ ಅವಧಿ ಜುಲೈ ತಿಂಗಳಲ್ಲಿ ಅಂತ್ಯಗೊಂಡ ನಂತರ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದರೆ ಅಂದಿನಿಂದ ಈ ಹೆಚ್ಚುವರಿ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೊಂದಿದ್ದಾರೆ.







