ಬಾಲಕನನ್ನು ನಗ್ನವಾಗಿಸಿ ಪೂಜೆ ಮಾಡಿಸಿದ ಪ್ರಕರಣ: ಒಬ್ಬ ಆರೋಪಿ ಬಂಧನ, ಇನ್ನಿಬ್ಬರಿಗಾಗಿ ಶೋಧ
ಕೊಪ್ಪಳ : ತಂದೆಗೆ ಸಾಲ ನೀಡಿದ ಸಾಲಗಾರರು ಇನ್ನು ಅವರಿಗೆ ತೊಂದರೆ ನೀಡದೇ ಇರಬೇಕೆಂದಿದ್ದರೆ ನಗ್ನನಾಗಿ ಪೂಜೆ ಸಲ್ಲಿಸಬೇಕು ಎಂದು ಅಪ್ರಾಪ್ತ ಬಾಲಕನೊಬ್ಬನನ್ನು ಪುಸಲಾಯಿಸಿ ಆತ ಹಾಗೆಯೇ ಮಾಡುವಂತೆ ಮಾಡಿದ ಆರೋಪದ ಮೇಲೆ ಕೊಪ್ಪಳದಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಘಟನೆಯ ವೀಡಿಯೋವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಶರಣಪ್ಪ ತಲವಾರ, ವಿರೂಪನಗೌಡ ಮತ್ತು ಶರಣಪ್ಪ ಓಜನಹಳ್ಳಿ ಎಂದು ಗುರುತಿಸಲಾಗಿದ್ದು ಅವರೆಲ್ಲರೂ ಕೊಪ್ಪಳ ನಿವಾಸಿಗಳಾಗಿದ್ದು ಬಾಲಕನಿಗೆ ತಿಳಿದವರಾಗಿದ್ದಾರೆ.
ಆರೋಪಿಗಳ ಪೈಕಿ ತಳವಾರನನ್ನು ಬಂಧಿಸಲಾಗಿದ್ದರೆ ಉಳಿದ ಇಬ್ಬರಿಗಾಗಿ ಶೋಧ ನಡೆಯುತ್ತಿದೆ.
ಘಟನೆ ಜೂನ್ ತಿಂಗಳಿನಲ್ಲಿ ನಡೆದಿದ್ದರೂ ವೀಡಿಯೋ ಬಗ್ಗೆ ಬಾಲಕನ ಹೆತ್ತವರಿಗೆ ರವಿವಾರವಷ್ಟೇ ತಿಳಿದು ಬಂದಿದ್ದರಿಂದ ಅದೇ ದಿನ ದೂರು ದಾಖಲಿಸಲಾಯಿತು.
ಹುಬ್ಬಳ್ಳಿಯಲ್ಲಿ ತಮಗೆ ಜಲ ಜೀವನ ಮಿಷನ್ ಕೆಲಸದ ಗುತ್ತಿಗೆ ದೊರಕಿದ್ದರಿಂದ ಬಾಲಕನನ್ನು ಕೆಲಸಕ್ಕೆ ಕಳುಹಿಸಿಕೊಡುವಂತೆ ಆರೋಪಿಗಳು ಬಾಲಕನ ತಂದೆಯನ್ನು ಕೇಳಿಕೊಂಡಿದ್ದರು. ಬಾಲಕನ ತಂದೆ ಆರ್ಥಿಕ ಸಮಸ್ಯೆಯಲ್ಲಿದ್ದನಲ್ಲದೆ ಆರೋಪಿಗಳಲ್ಲಿ ಸಾಲ ಕೂಡ ಪಡೆದಿದ್ದ.
ಇದೇ ವಿಚಾರವನ್ನು ಬಳಸಿಕೊಂಡು ಅವರು ಬಾಲಕನ ಮನವೊಲಿಸಿ, ವಿವಸ್ತ್ರನಾಗಿ ಪೂಜೆ ಸಲ್ಲಿಸಿದರೆ ನಿನ್ನ ತಂದೆಗೆ ಸಾಲಗಾರರ ಕಾಟವಿರುವುದಿಲ್ಲ, ಅಷ್ಟೇ ಅಲ್ಲದೆ ನಿನ್ನ ಕುಟುಂಬ ಶ್ರೀಮಂತವಾಗುತ್ತದೆ ಎಂದು ಹೇಳಿದ್ದರೆನ್ನಳಾಗಿದೆ.
ಅವರ ಮಾತನ್ನು ನಂಬಿದ ಬಾಲಕ ನಗ್ನನಾಗಿದ್ದೇ ಅಲ್ಲದೆ ಮೈಗೆ ವಿಭೂತಿ ಹಚ್ಚಿ, ಕುತ್ತಿಗೆಯಲ್ಲಿ ಮಾಲೆ ಧರಿಸಿ ಕಣ್ಮುಚ್ಚಿ ನಿಂತಿದ್ದ. ಆರೋಪಿಗಳು ಒಂದು ನಿಂಬೆ ಹಣ್ಣನ್ನು ತುಂಡರಿಸಿ ಅದನ್ನು ಬಾಲಕನ ತಲೆ ಮೇಲೆ ಹಿಂಡುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ನಂತರ ಈ ಘಟನೆಯ ಬಗ್ಗೆ ತಂದೆ ಅಥವಾ ಬೇರಿನ್ಯಾರಿಗೂ ಹೇಳಿದರೆ ತಂದೆಯನ್ನು ಹತ್ಯೆಗೈಯ್ಯುವುದಾಗಿ ಆರೋಪಿಗಳು ಬಾಲಕನಿಗೆ ಬೆದರಿಸಿದ್ದರು ಎಂದು ಆರೋಪಿಸಲಾಗಿದೆ.
ಐಪಿಸಿಯ ವಿವಿಧ ಸೆಕ್ಷನ್‍ಗಳು, ಐಟಿ ಕಾಯಿದೆ ಹಾಗೂ ಬಾಲ ನ್ಯಾಯ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.