ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: 40 ಸಾವಿರಕ್ಕೂ ಅಧಿಕ ಮಂದಿಯಿಂದ ಮುಖ್ಯ ನ್ಯಾಯಾಧೀಶರಿಗೆ ಮನವಿ ಪತ್ರ ಸಲ್ಲಿಕೆ

ಬೆಂಗಳೂರು, ಅ. 3: ‘ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ನೀಡಿರುವ ಶಿಕ್ಷೆಯ ವಿನಾಯಿತಿಯನ್ನು ಹಿಂಪಡೆದು, ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕು' ಎಂದು ವಿವಿಧ ಮಹಿಳಾ ಸಂಘಟನೆಗಳು ಸೇರಿ ರಾಜ್ಯದ 29 ಜಿಲ್ಲೆಗಳಲ್ಲಿ 40ಸಾವಿರಕ್ಕೂ ಹೆಚ್ಚು ಜನರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಈ ಅಭಿಯಾನವನ್ನು ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಪ್ರಚಾರ ಮಾಧ್ಯಮಗಳನ್ನು ಬಳಸದೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ ಮೂಲಕ ಕಾಲ್ನಾಡಿಗೆಯಲ್ಲಿ ಮಾಡಲಾಗಿದೆ. ಈ ಪತ್ರವನ್ನು ಅನುಮೋದಿಸುವ 40ಸಾವಿರ ಸಹಿಗಳು ಬಿಲ್ಕಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಸಾವಿರ ವೈಯಕ್ತಿಕ ಸಂಭಾಷಣೆಗಳನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಐದರಿಂದ ಮೂವತ್ತು ನಿಮಿಷಗಳವರೆಗೆ ಇರುತ್ತದೆ. ಈ ಸಂವಾದಗಳನ್ನು ಬೀದಿಗಳಲ್ಲಿ, ಕೊಳೆಗೇರಿಗಳಲ್ಲಿ, ಮಾಲ್-ಅಪಾರ್ಟ್‍ಮೆಂಟ್, ಸಂಕೀರ್ಣಗಳಲ್ಲಿ, ಕಾಲೇಜು, ದೇವಾಲಯ-ಮಸೀದಿಗಳ-ಚರ್ಚಗಳ ಮುಂದೆ, ಬಸ್ ನಿಲ್ದಾಣ- ಮೆಟ್ರೋನಿಲ್ದಾಣ-ಆಟೋಸ್ಟ್ಯಾಂಡ್‍ಗಳಲ್ಲಿ ನಡೆಸಲಾಯಿತು.
ಆಟೋಚಾಲಕರು, ಕಟ್ಟಡ ಕಾರ್ಮಿಕರು, ಬೀಡಿಕಾರ್ಮಿಕರು, ಹೂವು ಮಾರಾಟ ಮಾಡುವವರು, ಮನೆಗೆಲಸದವರು ಮತ್ತು ಪೌರಕಾರ್ಮಿಕರು, ಆದಿವಾಸಿಗಳು, ಹಳ್ಳಿಗಳಲ್ಲಿನ ರೈತರು, ಕಲಾವಿದರು, ವಕೀಲರು, ಲೈಂಗಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಸರಕಾರಿ ಅಧಿಕಾರಿಗಳು, ಪುರುಷರು, ಮಹಿಳೆಯರು, ಲಿಂಗ ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಪತ್ರಕರ್ತರು ಮತ್ತು ಒಕ್ಕೂಟದ ಸದಸ್ಯರು ಎಲ್ಲರೂ ಸಹಿ ಮಾಡಿ, ಅಂಚೆ ಮೂಲಕ ನ್ಯಾಯಾಧೀಶರಿಗೆ ಕಳುಹಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಮನೋಹರ್ ತಿಳಿಸಿದ್ದಾರೆ.
‘ಬಿಲ್ಕಿಸ್ ಬಾನು ಅವರನ್ನು ಅತ್ಯಾಚಾರ ಮಾಡಿದವರಿಗೆ ಜೀವಾವಧಿ ಶಿಕ್ಷೆಯಿಂದ ವಿನಾಯಿತಿ ನೀಡಿ, ಬಿಡುಗಡೆ ಮಾಡಿದಾಗ ದೇಶದ್ಯಾಂತ ಪ್ರತಿಭಟನೆಗಳು ನಡೆದವು. ಬ್ರಾಹ್ಮಣರು ಎಂಬ ಕಾರಣಕ್ಕಾಗಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಗುಜಾರಾತ್‍ನಲ್ಲಿ ಬಿಲ್ಕಿಸ್ ಬಾನು ಅವರ ಕುಟುಂಬ ಭಯದಲ್ಲಿ ಬದುಕುತ್ತಿದೆ. ಅವರಿಗೆ ಸರಕಾರವು ರಕ್ಷಣೆಯನ್ನು ಒದಗಿಸಿ, ಅತ್ಯಾಚಾರಿಗಳನ್ನು ಜೈಲಿಗೆ ಹಾಕಬೇಕು'
-ಗೌರಮ್ಮ, ಜನವಾದಿ ಮಹಿಳಾ ಸಂಘಟನೆ






.jpeg)



