ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ 4ಕೋಟಿ ರೂ. ಅನುದಾನ ಘೋಷಣೆ
ಬೆಂಗಳೂರು, ಅ.3: ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ, ರಾಜ್ಯ ಸರಕಾರ ಒಟ್ಟು ಎಂಟು ಕೋಟಿ ರೂಪಾಯಿಗಳಷ್ಟು ಅನುದಾನ ನಿಗದಿಪಡಿಸಿ 4 ಕೋಟಿ ರೂ.ಗಳನ್ನು, ತಕ್ಷಣಕ್ಕೆ ರೈತರಿಗೆ ವಿತರಿಸಲು, ಬಿಡುಗಡೆಗೊಳಿಸಿದೆ.
ಸೋಮವಾರ ಈ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು, ಹಾಸನ ಜಿಲ್ಲೆಯಲ್ಲಿ ಒಟ್ಟು 20 ಸಾವಿರ ಹೆಕ್ಟೇರ್ ಅಡಿಕೆ ಬೆಳೆ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಹಬ್ಬಿದೆ.
ಇದರ ನಿಯಂತ್ರಣ ಬಗ್ಗೆ, ತೋಟಗಾರಿಕೆ ಇಲಾಖೆ ಔಷದಿ ಹಾಗೂ ಸಿಂಪರಣೆ ವೆಚ್ಚ ಭರಿಸಲು ಅನುದಾನ ಬಿಡುಗಡೆ ಗೊಳಿಸಿದ್ದು, ರೈತ ಬಾಂಧವರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.
ರೋಗ ನಿಯಂತ್ರಣಕ್ಕೆ, ಉತ್ತಮ ಗುಣ ಮಟ್ಟದ ಸಸ್ಯ ಸಂರಕ್ಷಣೆ ಔಷಧ ಕೊಳ್ಳಲು, ಪ್ರತಿ ಹೆಕ್ಟೇರ್‍ಗೆ, 4 ಸಾವಿರ ರೂ., ಅನುದಾನವನ್ನು, ಮೊದಲ ಸಿಂಪರಣೆಗಾಗಿ 1.5 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಮಿತಿಗೊಳಪಟ್ಟು ರೈತರಿಗೆ, ಅನುದಾನ ಒದಗಿಸಲಾಗುವುದು ಎಂದರು.