ವಿಜ್ಞಾನ ಪ್ರಶಸ್ತಿಗಳ ರದ್ದತಿಯ ಹಿಂದಿರುವ ಅವೈಜ್ಞಾನಿಕತೆ

ಪ್ರತೀ ವರ್ಷವೂ ಭಾರತದ ವಿಜ್ಞಾನ ಸಮುದಾಯವು ಸೆಪ್ಟಂಬರ್ 26ನೇ ತಾರೀಕನ್ನು 1940 ಹಾಗೂ 1950ರ ದಶಕದಲ್ಲಿ ಭಾರತದ ವಿಜ್ಞಾನಕ್ಷೇತ್ರದ ದಿಗ್ಗಜ ಹಾಗೂ ಸಿಎಸ್‌ಐಆರ್‌ನ ಸ್ಥಾಪಕರಾದ ಶಾಂತಿ ಸ್ವರೂಪ ಭಟ್ನಾಗರ್ ಅವರ ಜನ್ಮದಿನವಾಗಿ ಆಚರಿಸುತ್ತದೆ. ಭಾರತದಲ್ಲಿ ಕಾರ್ಯಾಚರಿಸುವ ಅತ್ಯಂತ ಅಸಾಧಾರಣ ಪ್ರತಿಭಾವಂತ ಸಂಶೋಧಕರನ್ನು (45 ವರ್ಷದೊಳಗಿನ) ಗುರುತಿಸುವಂತಹ ‘ವಾರ್ಷಿಕ ಭಟ್ನಾಗರ್ ಪುರಸ್ಕಾರ’ವನ್ನು ಈ ದಿನದಂದು ಸರಕಾರ ನೀಡುತ್ತಿತ್ತು. ಆದರೆ ಈ ವರ್ಷ ಅದಕ್ಕೆ ಹೊರತಾಗಿದೆ. ಭಟ್ನಾಗರ್ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಈ ಸಲ ಘೋಷಿಸಲಾಗಿಲ್ಲ.
ಅದರ ಬದಲಿಗೆ ಸರಕಾರವು ಹಿಂದಿನ ವಾರ ನಡೆದಂತಹ ಉನ್ನತ ಮಟ್ಟದ ಸಭೆಯ ನಡಾವಳಿಗಳ ಪ್ರತಿಯೊಂದನ್ನು ಬಿಡುಗಡೆಗೊಳಿಸಿತ್ತು. ಖಾಸಗಿ ದತ್ತಿಗಳ ಮೂಲಕ ಈಗ ಅಸ್ತಿತ್ವದಲ್ಲಿರುವ ಬಹುತೇಕ ಪುರಸ್ಕಾರಗಳನ್ನು ರದ್ದುಪಡಿಸಲು ಮತ್ತು ಅದರ ಬದಲಿಗೆ ಆಯ್ದ ಕೆಲವು ಉನ್ನತ ಮಟ್ಟದ ಪುರಸ್ಕಾರವನ್ನು ಸ್ಥಾಪಿಸಲು ನಿರ್ಧರಿಸಿರುವುದನ್ನು ಸೆಯ ನಡಾವಳಿಗಳು ಬಹಿರಂಗಪಡಿಸಿವೆ.
ಸರಕಾರದ ಈ ನಿರ್ಧಾರವು ಉತ್ತರಕ್ಕಿಂತ ಹೆಚ್ಚಾಗಿ ಪ್ರಶ್ನೆಗಳನ್ನೇ ಸೃಷ್ಟಿಸಿದೆ. ಬಹುತೇಕ ಪ್ರಶಸ್ತಿಗಳನ್ನು ಹಠಾತ್ತನೆ ರದ್ದುಪಡಿಸಿರುವ ನಿರ್ಧಾರದ ಹಿಂದಿರುವ ತಾರ್ಕಿಕತೆ ಅಸ್ಪಷ್ಟವಾಗಿಯೇ ಉಳಿದಿದೆ. ಪ್ರಶಸ್ತಿಗಳ ನೀಡಿಕೆಯಲ್ಲಿ ನ್ಯಾಯಪರತೆಯಿಲ್ಲದಿರುವುದು ಸರಕಾರದ ಈ ನಿರ್ಧಾರಕ್ಕೆ ಒಂದು ಕಾರಣವಾಗಿರಬಹುದೇನೋ.
ಪ್ರಶಸ್ತಿ ಪ್ರದಾನದಲ್ಲಿ ಪಕ್ಷಪಾತ ಹಾಗೂ ಪೂರ್ವಾಗ್ರಹಗಳನ್ನು ತಳ್ಳಿಹಾಕದೆ ಇರಲು ಸಾಧ್ಯವಿಲ್ಲ. ಅಲ್ಲದೆ ಆಯ್ಕೆ ಸಮಿತಿಯ ಓರ್ವ ಅಥವಾ ಅಧಿಕ ಸದಸ್ಯರ ಒಲವಿಗೆ ಪಾತ್ರನಾದಲ್ಲಿ, ಪ್ರಶಸ್ತಿಯನ್ನು ಪಡೆಯುವುದು ಸುಲಭವಾಗಲಿದೆಯೆಂಬ ಪ್ರಬಲ ಭಾವನೆಯಿದೆ.
ಆದಾಗ್ಯೂ, ಪ್ರಶಸ್ತಿಗಳಿಗೆ ಕೆಟ್ಟ ಆಯ್ಕೆಗಳನ್ನು ಮಾಡಿರುವ ನಿದರ್ಶನಗಳು ಕೆಲವೇ ಕೆಲವು ಎನ್ನಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಪ್ರಶಸ್ತಿ ಆಯ್ಕೆಯ ಪ್ರಸಕ್ತ ವ್ಯವಸ್ಥೆಯು ನಿಸ್ಸಂದೇಹವಾಗಿ ಉತ್ಕೃಷ್ಟ ಸಾಧಕರನ್ನು ಪುರಸ್ಕರಿಸಿದೆ.
ಸರಕಾರದ ಈ ಉದ್ದೇಶದ ಕುರಿತಂತೆ ಹಲವಾರು ಊಹಾಪೋಹಗಳು ಭುಗಿಲೆದ್ದಿದೆ. ಈ ರದ್ದತಿಯು, ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಸಮಗ್ರ ಮಿತವ್ಯಯ ಕ್ರಮಗಳ ಭಾಗವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರದ್ದುಗೊಂಡ ಪ್ರಶಸ್ತಿಗಳಿಗೆ ಮೀಸಲಿಡಲಾಗುವ ವಾರ್ಷಿಕ ಬಜೆಟ್ ಮೊತ್ತವು ಅತ್ಯಂತ ಸಣ್ಣದಾಗಿರುವಾಗ, ಅದೇ ಕಾರಣವಾಗಿರುವ ಸಾಧ್ಯತೆ ತೀರಾ ಕಡಿಮೆ. ಅಲ್ಲದೆ ಖಾಸಗಿ ದತ್ತಿಗಳ ಮೂಲಕ ನೀಡಲಾಗುವ ಪ್ರಶಸ್ತಿಗಳಿಗೆ ಸರಕಾರವು ಯಾವುದಕ್ಕೂ ಖರ್ಚು ಮಾಡಬೇಕಾಗಿಲ್ಲ.
ವಿಚಿತ್ರವೆಂದರೆ, ಈ ಪ್ರಶಸ್ತಿಗಳನ್ನು ಘೋಷಿಸಲು ಬಳಸಲಾಗುವ ದತ್ತಿಸಂಸ್ಥೆಗಳನ್ನು ಏನುಮಾಡಲಾಗುವುದೆಂಬ ಬಗ್ಗೆ ಈ ಆದೇಶದಲ್ಲಿ ಯಾವುದೇ ಸ್ಪಷ್ಟನೆಯಿಲ್ಲ. ಈ ಆದೇಶದ ಇನ್ನೊಂದು ವಿಲಕ್ಷಣತೆಯೇನೆಂದರೆ ಎಲ್ಲಾ ಸಚಿವಾಲಯಗಳು ಎಲ್ಲಾ ‘ಪ್ರಾಧಾನ್ಯತೆ ರಹಿತ’ ಪುರಸ್ಕಾರಗಳನ್ನು ನಿಲ್ಲಿಸಬೇಕೆಂದು ಆದೇಶಿಸಿರುವುದಾಗಿದೆ.
ಹಾಲಿ ಸರಕಾರದ ಪ್ರಶ್ನಾರ್ಹ ವೈಜ್ಞಾನಿಕ ಕಾರ್ಯಸೂಚಿಯ ಬಗ್ಗೆ ಭಾರತೀಯ ವಿಜ್ಞಾನ ಸಮುದಾಯದ ಒಂದು ಸಣ್ಣ ಭಾಗವಷ್ಟೇ ಒಲವು ಹೊಂದಿದೆಯೆಂಬುದು ಈಗ ರಹಸ್ಯವಾಗಿಯೇನೂ ಉಳಿದಿಲ್ಲ. ಎಲ್ಲಾ ಪುರಸ್ಕಾರಗಳ ಕೇಂದ್ರೀಕರಣವು, ಆಯ್ಕೆ ಸಮಿತಿಗಳ ಮೇಲೆ ದೊಡ್ಡ ನಿಯಂತ್ರಣವನ್ನು ಸಾಧಿಸಲು ಹಾಗೂ ತನಗೆ ಹಿತವಾದ ವಿಜ್ಞಾನಿಗಳಿಗೆ ಪುರಸ್ಕಾರಗಳನ್ನು ನೀಡಲು ಸರಕಾರಕ್ಕೆ ಇರುವ ದಾರಿ ಎಂದು ಭಾವಿಸಲಾಗುತ್ತಿದೆ. ಇಂತಹ ಪುರಸ್ಕಾರಗಳಿಂದ ವಿಜ್ಞಾನಿಗಳ ಸ್ಥಾನಮಾನ ಹೆಚ್ಚಾಗುತ್ತಿದ್ದು, ಆ ಮೂಲಕ ಅವರಿಗೆ ವಿವಿಧ ಸಂಶೋಧನಾ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ನಾಯಕತ್ವದ ಹುದ್ದೆಗಳಿಗೆ ಭಡ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಫೆಲೋಶಿಪ್ ನೀಡಿಕೆಯಲ್ಲಿ ವಿಳಂಬ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ವಿಜ್ಞಾನಿಗಳ ಚಟುವಟಿಕೆಗಳ ಮೇಲೆ ನಿಗಾವಿರಿಸಲಾಗುತ್ತಿದೆ ಹಾಗೂ ಸರಕಾರದ ವೈಜ್ಞಾನಿಕ ನೀತಿಗಳ ಬಗ್ಗೆ ಮಾಡಲಾದ ಟೀಕಾತ್ಮಕವಾದ ವಿಮರ್ಶೆಗಳನ್ನು ಸರಕಾರವು ಉದಾರವಾಗಿ ಸ್ವೀಕರಿಸಿಲ್ಲ. ಕೋವಿಡ್ ಸಾಂಕ್ರಾಮಿಕದ ಹಾವಳಿಗೆ ಮುನ್ನವೇ, ಯುವ ಸಂಶೋಧಕರಿಗೆ ನೀಡಲಾಗುತ್ತಿರುವ ಫೆಲೋಶಿಪ್‌ಗಳು 2-3 ತಿಂಗಳುಗಳ ಕಾಲ ವಿಳಂಬವಾಗುತ್ತಿದ್ದುದಕ್ಕೆ ಹಲವಾರು ಸಾಂದರ್ಭಿಕ ನಿದರ್ಶನಗಳಿವೆ. ಆದರೆ ಕಳೆದ ಮೂರು ವರ್ಷಗಳಿಂದ ಆಶ್ಚರ್ಯಕರವೆಂಬಂತೆ ದೊಡ್ಡ ಸಂಖ್ಯೆಯ ಸಂಶೋಧಕರಿಗೆ ವಿಳಂಬದ ಅನುಭವವಾಗುತ್ತಿದೆ. ಈ ಫೆಲೋಶಿಪ್ ಹಾಗೂ ಅನುದಾನಗಳ ವಿಳಂಬದಿಂದಾಗಿ ಪರಿಣಿತ ಸಂಶೋಧಕರು ಅಗತ್ಯದ ಮಾದರಿಗಳನ್ನು, ರಾಸಾಯನಿಕಗಳನ್ನು ಅಥವಾ ಸಲಕರಣೆಗಳನ್ನು ಸಂಗ್ರಹಿಸಲು ಸಮರ್ಥರಾಗದೆ ತಮ್ಮ ಪ್ರಯೋಗಾಲಯಗಳಲ್ಲಿ ಕೈಕಟ್ಟಿ ಕುಳಿತುಕೊಳ್ಳುವಂತಹ ಪರಿಸ್ಥಿತಿಯುಂಟಾಗಿದೆ. ಅಲ್ಲದೆ ದೊಡ್ಡ ಸಂಖ್ಯೆಯ ಪಿಎಚ್.ಡಿ. ವಿದ್ಯಾರ್ಥಿಗಳು ತಮ್ಮ ಕುಟುಂಬಗಳ ಆರ್ಥಿಕ ಅಸಹಾಯಕತೆಯಿಂದಾಗಿ ಅರ್ಧದಲ್ಲಿಯೇ ಸಂಶೋಧನಾ ಅಧ್ಯಯನವನ್ನು ತೊರೆಯುತ್ತಿದ್ದಾರೆ.
ಕೇವಲ ನಿರ್ದಿಷ್ಟ ಖಾತೆಗೂ ಹೊಸ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಹಾಗೂ ಯೋಜನೆಯ ಎಲ್ಲಾ ವೆಚ್ಚಗಳನ್ನು ನಿರ್ದಿಷ್ಟ ಖಾತೆಯ ಮೂಲಕವೇ ಭರಿಸಬೇಕೆಂಬ ಇನ್ನೊಂದು ಆದೇಶವನ್ನು ಇತ್ತೀಚೆಗೆ ಕೇಂದ್ರ ಸರಕಾರ ಹೊರಡಿಸಿತ್ತು. ಇದರಿಂದ ಅನಗತ್ಯ ಕಾಗದ ಕೆಲಸಗಳಿಗಾಗಿಯೇ (ಪೇಪರ್‌ವರ್ಕ್) ಕಾಲಹರಣವಾಗುತ್ತದೆ. ಅಲ್ಲದೆ ಒಂದೇ ಪ್ರಯೋಗಾಲಯದ ಒಂದೇ ರಾಸಾಯನಿಕಕ್ಕಾಗಿ ಹಲವಾರು ಆರ್ಡರ್‌ಗಳನ್ನು ಮಾಡಬೇಕಾದ ಹಾಸ್ಯಾಸ್ಪದ ಸನ್ನಿವೇಶಗಳಿಗೆ ಎಡೆ ಮಾಡಿಕೊಡಲಿದೆ. ಯಾಕೆಂದರೆ ವಿವಿಧ ಯೋಜನೆಗಳಡಿಯಲ್ಲಿ ಅದಕ್ಕೆ ಬಿಲ್ ಮಾಡಬೇಕಾಗುತ್ತದೆ. ಆದಾಗ್ಯೂ, ವ್ಯಾಪಕ ಅಸಮಾಧಾನ ವ್ಯಕ್ತವಾದ ಬಳಿಕ ಸರಕಾರವು ತನ್ನ ಈ ಆದೇಶವನ್ನು ಮರುಪರಿಶೀಲಿಸುವುದಾಗಿ ಭರವಸೆ ನೀಡಿರುವುದು ಸಮಾಧಾನಕರವಾಗಿದೆ. ಕೆಲವು ತಿಂಗಳುಗಳ ಹಿಂದೆ ಸರಕಾರವು ವೈಜ್ಞಾನಿಕ ಉಪಕರಣಗಳ ಖರೀದಿಯ ಮೇಲಿನ ಜಿಎಸ್‌ಟಿಯನ್ನು ಶೇ.5ರಿಂದ ಶೇ.18ಕ್ಕೆ ಹೆಚ್ಚಿಸಿರುವುದು ಹಲವಾರು ಸಂಸ್ಥೆಗಳ ಸಂಶೋಧನಾ ಬಜೆಟ್‌ಗೆ ಹಾವಳಿಯನ್ನು ಸೃಷ್ಟಿಸಿದೆ.
ಕೇವಲ ಓರ್ವ ಸಂಶೋಧಕನನ್ನು ಆಹ್ವಾನಿಸಲು ಇಲ್ಲವೇ ವಿದೇಶಿ ವಿಶ್ವವಿದ್ಯಾನಿಲಯದ ಜೊತೆ ತಿಳುವಳಿಕಾ ಒಪ್ಪಂದವನ್ನು ಏರ್ಪಡಿಸಿಕೊಳ್ಳಲು ಹಲವು ಅನುಮತಿಗಳನ್ನು ಪಡೆಯುವುದನ್ನು ಕಡ್ಡಾಯಗೊಳಿಸಿರುವುದರಿಂದ ಭವಿಷ್ಯದಲ್ಲಿ ಅಂತರ್‌ರಾಷ್ಟ್ರೀಯ ಸಹಯೋಗಗಳು ಏರ್ಪಡುವುದನ್ನು ಅಸಾಧ್ಯಗೊಳಿಸಿದೆ. ವಿದೇಶಿಯರು ಹಾಗೂ ವಿದೇಶಿ ಕರೆನ್ಸಿಯನ್ನು ಒಳಗೊಂಡ ಯಾವುದೇ ಕಾರ್ಯಕ್ರಮ, ವ್ಯವಹಾರವನ್ನು ಮಂದವಾಗಿ ನೋಡಲಾಗುತ್ತಿದೆ ಹಾಗೂ ಅವುಗಳನ್ನು ಏರ್ಪಡಿಸಲು ಹಲವಾರು ತೊಡಕುಗಳನ್ನು ನಿವಾರಿಸಬೇಕಾಗುತ್ತದೆ. ಇದರಿಂದಾಗಿ ಸಮಗ್ರ ಸಂಶೋಧನೆಗೆ ಅಡ್ಡಿಯಾಗಲಿದೆ. ಇದರಿಂದಾಗಿ ಇಡೀ ಪ್ರಕ್ರಿಯೆಯು ಅನಗತ್ಯವಾಗಿ ಜಟಿಲವಾಗಿಬಿಡುತ್ತದೆ.
ರದ್ದುಗೊಳಿಸಲಾಗುವ ಪ್ರಶಸ್ತಿಗಳ ಬದಲಿಗೆ ಕೆಲವೇ ಕೆಲವು ಉನ್ನತ ಮಟ್ಟದ ಪ್ರಶಸ್ತಿಗಳನ್ನು ಸ್ಥಾಪಿಸುವ ಉದ್ದೇಶವನ್ನು ಸರಕಾರ ಹೊಂದಿದ್ದು, ಅದಕ್ಕೆ ವಿಜ್ಞಾನ ರತ್ನ ಎಂಬ ಹೆಸರನ್ನಿಡುವ ಬಗ್ಗೆ ಚಿಂತಿಸುತ್ತಿದೆಯೆನ್ನಲಾಗಿದೆ. ಈ ನೂತನ ಪ್ರಶಸ್ತಿಗಳು ಕೇವಲ ವಿವಿಧ ಸಂಶೋಧನಾ ವಿಭಾಗಗಳಲ್ಲಿ ಮಾತ್ರವಲ್ಲದೆ ಸಂಶೋಧಕರನ್ನೂ, ವೈವಿಧ್ಯತೆಯನ್ನು ಒಳಗೊಂಡಿರಬೇಕಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ನೂತನ ಪುರಸ್ಕಾರಗಳನ್ನು ಸಂಶೋಧನೆಯ ಗುಣಮಟ್ಟದ ಮೇಲೆ ನಿರ್ಧರಿಸಲಾಗುತ್ತದೆಯೇ ಅಥವಾ ಅವು ಸರಕಾರದ ಒಲುಮೆಗೆ ಪಾತ್ರರಾದ ವಿಜ್ಞಾನಿಗಳನ್ನು ಭಡ್ತಿಯತ್ತ ಕೊಂಡೊಯ್ಯುವ ವಾಹನವಾಗಲಿದೆಯೇ ಎಂಬ ಬಗ್ಗೆ ದೇಶದ ವಿಜ್ಞಾನ ಸಮುದಾಯ ಕಾತರದಿಂದ ಕಾಯುತ್ತಿದೆ.
ವಿಜ್ಞಾನಿಗಳನ್ನು ಪ್ರೋತ್ಸಾಹಿಸಲು ಕೆಲವೇ ಪ್ರಶಸ್ತಿಗಳು!
* ಕೇಂದ್ರ ಸರಕಾರವು ಸಾಧಕರಿಗೆ ನೀಡಲಾಗುವ ಹಲವಾರು ಪುರಸ್ಕಾರಗಳನ್ನು ತೆರವುಗೊಳಿಸಿ, ಅವುಗಳ ಬದಲಿಗೆ ಕೆಲವೇ ಕೆಲವು ಉನ್ನತ ಮಟ್ಟದ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ.
* ಈ ಪುರಸ್ಕಾರಗಳ ರದ್ದತಿಯ ಹಿಂದಿರುವ ವೈಚಾರಿಕತೆ ಇನ್ನೂ ಅಸ್ಪಷ್ಟವಾಗಿದೆ.
* ಆರ್ಥಿಕತೆಯ ಕುಸಿತವು ಪುರಸ್ಕಾರಗಳ ರದ್ದತಿಗೆ ಇರುವ ಕಾರಣವಾಗಿರುವ ಸಾಧ್ಯತೆ ತೀರಾ ಕಡಿಮೆ. ಯಾಕೆಂದರೆ ಪ್ರಶಸ್ತಿಗಳಿಗೆ ಬಜೆಟ್‌ನಲ್ಲಿ ನಿಗದಿಪಡಿಸಲಾಗಿರುವ ಅನುದಾನದ ಮೊತ್ತವು ಅತ್ಯಂತ ಕಡಿಮೆಯಾಗಿದೆ.
* ಪ್ರಶಸ್ತಿ ನೀಡಿಕೆಯಲ್ಲಿ ಪಕ್ಷಪಾತ ಹಾಗೂ ಪೂರ್ವಾಗ್ರಹದ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂಬ ಆತಂಕ ವ್ಯಕ್ತವಾಗಿದೆ.
(ಈ ಬರಹದ ಲೇಖಕರಾದ ಅನಿಕೇತ್ ಸುಲೆ ಅವರು ಮುಂಬೈನ ಹೋಮಿ ಭಾಭಾ ವಿಜ್ಞಾನ ಶಿಕ್ಷಣ ಕೇಂದ್ರದ ಪ್ರೊಫೆಸರ್ ಆಗಿದ್ದಾರೆ).
ಕೃಪೆ : The Hindu







