ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಮಾಡಿದ ಆಕೃತಿಗೆ ಪ್ರಧಾನಿ ಮೋದಿ ಮೆಚ್ಚುಗೆ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯು ಒಂದು ದೊಡ್ಡ ಸವಾಲಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರಿನ ನೈಋತ್ಯ ರೈಲ್ವೆಯು ರೈಲ್ವೆ ನಿಲ್ದಾಣಗಳಲ್ಲಿ ಆಯೋಜಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಕುರಿತ ವಿಶಿಷ್ಟ ಜಾಗೃತಿ ಅಭಿಯಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಶ್ಲಾಘನೆ ಪಡೆದಿದೆ.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್) ರೈಲು ನಿಲ್ದಾಣದ ಸಿಬ್ಬಂದಿ ಸೋಮವಾರ ರೈಲು ನಿಲ್ದಾಣದ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಮೂರ್ತಿ ತಯಾರಿಸಿದ್ದಾರೆ. ಶಿಲ್ಪದ ಮೇಲಿರುವ ಫಲಕದಲ್ಲಿ, “ಈ ಶಿಲ್ಪವನ್ನು ಕಳೆದ 12 ಗಂಟೆಗಳಲ್ಲಿ ಸಂಗ್ರಹಿಸಲಾದ ಸಾವಿರಾರು ಪ್ಲಾಸ್ಟಿಕ್ ನೀರಿನ ಬಾಟಲಿಗಳಿಂದ ಮಾಡಲಾಗಿದೆ. ಈ ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳನ್ನು ರೈಲ್ವೆ ನಿಲ್ದಾಣದಲ್ಲಿ ಮತ್ತು ಸುತ್ತಮುತ್ತ ಎಸೆದಿದ್ದಾರೆ'' ಎಂದು ಬರೆಯಲಾಗಿದೆ.
ಇದನ್ನೂ ಓದಿ: ವೇದಿಕೆಯಲ್ಲಿ ಕುಸಿದು ಮೃತಪಟ್ಟ ಖ್ಯಾತ ಒಡಿಯಾ ಗಾಯಕ ಮುರಳಿ ಮೊಹಾಪಾತ್ರ
ಜನನಿಬಿಡ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಿಸಲಾಗಿರುವ ರಾಕ್ಷಸ ಆಕಾರದ ಶಿಲ್ಪ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ನೈಋತ್ಯ ರೈಲ್ವೆಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದು ಶ್ಲಾಘನೀಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ : ''ಇಂತಹ ಪ್ರಯತ್ನಗಳು ನವೀನ ಮತ್ತು ಶ್ಲಾಘನೀಯ ಮಾತ್ರವಲ್ಲ, ಮುಖ್ಯವಾಗಿ ನಮ್ಮ ಸುತ್ತಮುತ್ತಲಿನ ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಮ್ಮ ಮೂಲಭೂತ ನಾಗರಿಕ ಕರ್ತವ್ಯವನ್ನು ನೆನಪಿಸುತ್ತದೆ'' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Such efforts are not only innovative and commendable but most importantly remind us of our basic civic duty of keeping our surroundings and public places clean. https://t.co/vyEE857mcH
— Narendra Modi (@narendramodi) October 3, 2022







