12 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ಘೋಷಣೆ
ಬೆಂಗಳೂರು, ಅ.5: ರಾಜ್ಯ ಚುನಾವಣಾ ಆಯೋಗವು ಪ್ರಸಕ್ತ ಸಾಲಿನ ನವೆಂಬರ್ ವರೆಗೆ ಅವಧಿ ಮುಕ್ತಾಯವಾಗಲಿರುವ 12 ಗ್ರಾಮ ಪಂಚಾಯಿತ್ ಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ಖಾಲಿಯಿರುವ 49 ಸದಸ್ಯ ಸ್ಥಾನಗಳಿಗೆ ಅ.28ರಂದು ಮತದಾನ ನಡೆಯುವಂತೆ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದೆ.
ಜಿಲ್ಲಾಧಿಕಾರಿಗಳು ಅ.13ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ಅಂದಿನಿಂದಲೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಅ.18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅ.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ.21 ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ಅ.28ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯವಿದ್ದಲ್ಲಿ ಅ.30ರಂದು ಮರು ಮತದಾನ ನಡೆಯಲಿದೆ. ಮತಗಳ ಎಣಿಕೆ ಕಾರ್ಯವು ಅ.31ರಂದು ಬೆಳಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ಬೀದರ್ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೈದರಾಬಾದ್‍ನ ಇಸಿಐಎಲ್ ಸಂಸ್ಥೆ ತಯಾರಿಸಿರುವ ಮಲ್ಟಿಚಾಯ್ಸ್ ವಿದ್ಯುನ್ಮಾನ ಯಂತ್ರದ(ಇವಿಎಂ) ಮೂಲಕ ಚುನಾವಣೆ ನಡೆಸಲು ಆದೇಶಿಸಲಾಗಿದೆ. ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅ.13 ರಿಂದ ಅ.31ರವರೆಗೆ ಜಾರಿಯಲ್ಲಿರುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆಗಳ ಮತಪತ್ರದಲ್ಲಿ ‘ನೋಟಾ(ಓಔಖಿಂ)’ ಅವಕಾಶ ಇರುವುದಿಲ್ಲ.
ಅವಧಿ ಮುಕ್ತಾಯವಾಗುತ್ತಿರುವ ಗ್ರಾ.ಪಂ.ಗಳು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾ.ಪಂ, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆನ್ನಯ್ಯನ ಕೋಟೆ ಗ್ರಾ.ಪಂ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರ ಗ್ರಾ.ಪಂ, ಯಕ್ಕುಂಡಿ(ದೂಪದಾಳ) ಗ್ರಾ.ಪಂ, ಮಲ್ಲೂರ(ಕಾಗಿಹಾಳ) ಗ್ರಾ.ಪಂ, ಬಡ್ಲಿ ಗ್ರಾ.ಪಂ, ರಾಯಭಾಗ ತಾಲೂಕಿನ ಜಲಾಲಾಪೂರ ಗ್ರಾಮ ಪಂಚಾಯಿತಿ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗಂಜಿಹಾಳ ಗ್ರಾ.ಪಂ, ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಯದಲಾಪೂರ ಗ್ರಾ.ಪಂ, ಅಷ್ಟೂರ ಗ್ರಾ.ಪಂ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬಿಲ್ಲಹಳ್ಳಿ ಗ್ರಾ.ಪಂ ಹಾಗೂ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯಲಿದೆ.
ಖಾಲಿಯಿರುವ ಸದಸ್ಯ ಸ್ಥಾನಗಳು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿಯ 21 ಸದಸ್ಯ ಸ್ಥಾನ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್.ಕಡದಕಟ್ಟೆ ಗ್ರಾಮ ಪಂಚಾಯಿತಿಯ 7 ಸದಸ್ಯ ಸ್ಥಾನ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮ ಪಂಚಾಯಿತಿಯ 21 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.