ಭಟ್ಕಳ: ಬಿಜೆಪಿ ಜಿಲ್ಲೆಯ ಜನತೆಯ ಕ್ಷಮೆ ಕೇಳಲಿ- ಸಂತೋಷ ನಾಯ್ಕ

ಭಟ್ಕಳ: ಹೊನ್ನಾವರದ ಪರೇಶ ಮೇಸ್ತನನ್ನು ಅನ್ಯಕೋಮಿನವರು ಕೊಲೆ ಮಾಡಿದ್ದಾರೆ, ಇದಕ್ಕೆ ಕಾಂಗ್ರೆಸ್‌ನವರು ಕಾರಣ ಎಂದು ಬಿಂಬಿಸಿ ಸುಳ್ಳು ಹೇಳಿದ್ದ ಬಿ.ಜೆ.ಪಿ. ಪಕ್ಷದವರು ಇಂದು ಕಾಂಗ್ರೆಸ್ ಹಾಗೂ ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಎಂ. ನಾಯ್ಕ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಂದು ಕಾಂಗ್ರೆಸ್ ಪಕ್ಷ ಕೊಲೆಗಾರರು ಯಾರೇ ಇರಲಿ ಅವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಆಗ್ರಹಿಸಿತ್ತು. ಆದರೆ ಬಿ.ಜೆ.ಪಿ.ಯವರು ಕೊಲೆಯನ್ನು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಇಡೀ ಜಿಲ್ಲೆಯಲ್ಲಿ ಗಲಭೆಯೆಬ್ಬಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದ್ದಲ್ಲದೇ ಅನೇಕ ಅಮಾಯಕ ಮೇಲೆ ಪ್ರಕರಣ ದಾಖಲು ಆಗುವಂತೆ ಮಾಡಿದರು.
ಪರೇಶ ಮೇಸ್ತ ಎನ್ನುವ ಅಮಾಯಕನ ಸಾವಿನ ಬಗ್ಗೆ ನಮಗೂ ಬೇಸರವಿದೆ, ಆದರೆ ಅಂದಿನ ಸಚಿವರಾಗಿದ್ದ ಆರ್.ವಿ.ದೇಶಪಾಂಡೆಯವರು ಆತನ ಕುಟುಂಬದವರಿಗೆ ಕೆ.ಡಿ.ಸಿ.ಸಿ.ಬ್ಯಾಂಕಿನಲ್ಲಿ ನೌಕರಿ ಕೊಡಿಸುತ್ತೇನೆ ಎಂದು ಹೇಳಿದ್ದರು. ಆತನ ಕುಟುಂಬದ ಬಡತನ ನೋಡಿ 2 ಲಕ್ಷ ರೂಪಾಯಿ ಕಳುಹಿಸಿದ್ದರು. ಆದರೆ ಬಿ.ಜೆ.ಪಿ.ಯವರು ಆತನ ತಂದೆಯನ್ನು ಯಾವುದಕ್ಕೂ ಒಪ್ಪಲು ಬಿಡದೇ ಇಂದು ಕುಟುಂಬಕ್ಕೆ ನೌಕರಿಯೂ ಇಲ್ಲ, ಹಣವೂ ಇಲ್ಲವಾಗಿದೆ. ಇದಕ್ಕೆಲ್ಲ ಬಿ.ಜೆ.ಪಿ.ಯವರ ಚುನಾವಣಾ ತಂತ್ರಗಾರಿಕೆಯೇ ಕಾರಣ ಎಂದೂ ಅವರು ದೂರಿದರು.
ಮಾಜಿ ಶಾಸಕ ಜೆ.ಡಿ. ನಾಯ್ಕ ಮಾತನಾಡಿ ಅಂದು ರಾಜ್ಯದಲ್ಲಿದ್ದ ಕಾಂಗ್ರೆಸ್ ಸರಕಾರ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಿತ್ತು. ನಿಸ್ಪಕ್ಷಪಾತ ತನಿಖೆಯಾಗಬೇಕು ಎನ್ನುವುದು ಉದ್ದೇಶವಾಗಿತ್ತು. ಆದರೆ ಪರೇಶ ಮೇಸ್ತನ ತಂದೆಯವರ ಒಳ್ಳೆಯತನವನ್ನು ಬಿ.ಜೆ.ಪಿ. ದುರುಪಯೋಗ ಪಡಿಸಿಕೊಂಡು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರು. ಅಂದು ಶವ ಪರೀಕ್ಷೆಯನ್ನು ಮಣಿಪಾಲದಲ್ಲಿಯೇ ಮಾಡಬೇಕು ಎಂದು ಆಗ್ರಹಿಸಿದ ಬಿ.ಜೆ.ಪಿ. ಇಂದು ಮರೆತಂತಿದೆ. ಬಿ.ಜೆ.ಪಿ. ವಕ್ತಾರ ನಾಗರಾಜ ನಾಯ್ಕ ಸ್ವತ ವಕೀಲರಾಗಿದ್ದುಕೊಂಡು ಶವ ಪರೀಕ್ಷೆಯನ್ನು ಮಣಿಪಾಲದಲ್ಲಿ ಮಾಡಿಸುವ ಅಗತ್ಯತೆ ಇತ್ತೇ ಎಂದು ಪ್ರಶ್ನಿಸುತ್ತಾರೆ, ಇವರ ನಡೆಯೇ ಏನೆಂದು ತಿಳಿಯುತ್ತಿಲ್ಲ. ಸಿ.ಬಿ.ಐ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿದ್ದು ಅವರು ಅಂತಿಮ ಬಿ ವರದಿಯನ್ನು ಸಲ್ಲಿಸಿದ ನಂತರ ಅದನ್ನು ಪ್ರಶ್ನೆ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ ಎಂದೂ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಮಾ ಮೊಗೇರ ಅಳ್ವೇಕೋಡಿ ಮಾತನಾಡಿ ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿ, ಜಿಲ್ಲೆಯಲ್ಲಿ ಗಲಭೆಯನ್ನು ಎಬ್ಬಿಸಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತೆ ಮಾಡಿದ ಬಿ.ಜೆ.ಪಿ. ಕೃತ್ಯ ಖಂಡನೀಯವಾಗಿದೆ. ಕೊಲೆಯ ಸುಳ್ಳು ಪ್ರಚಾರದಿಂದ ರಾಜ್ಯದಲ್ಲಿ 50-60 ಬಿ.ಜೆ.ಪಿ. ಶಾಸಕರು ಆಯ್ಕೆಯಾಗಿದ್ದು ಅವರೆಲ್ಲರೂ ರಾಜೀನಾಮೆ ಕೊಟ್ಟು ಪುನಃ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು. ಅಲ್ಲದೇ ಪರೇಶ ಮೇಸ್ತ ಅವರ ಕುಟುಂಬಕ್ಕೆ ದೇಶಪಾಂಡೆಯವರು ಕೊಟ್ಟ 2 ಲಕ್ಷ ರೂಪಾಯಿಯನ್ನು ಕುಟುಂಬದವರು ನಿರಾಕರಿಸಿದ್ದಾರೆ. ಆ ಹಣ ವಾಪಾಸು ದೇಶಪಾಂಡೆಯವರಿಗೆ ತಲುಪಿಲ್ಲ ಹಾಗಾದರೆ ಅದು ಎಲ್ಲಿ ಹೋಯಿತು ಎಂದು ಜನತೆಗೆ ತಿಳಿಸಬೇಕಾಗಿದೆ ಎಂದೂ ಆವರು ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಪ್ರಮುಖರಾದ ವೆಂಕಟೇಶ ನಾಯ್ಕ. ಟಿ.ಡಿ.ನಾಯ್ಕ, ಕೆ.ಜಿ.ನಾಯ್ಕ, ಸಚಿನ್ ನಾಯ್ಕ, ಮಂಜು ನಾಯ್ಕ, ಮಹೇಶ ನಾಯ್ಕ, ಸಂತೋಷ ನಾಯ್ಕ, ಮಹಾಬಲೇಶ್ವರ ನಾಯ್ಕ, ನಾಗೇಶ ದೇವಡಿಗ, ಗೋವಿಂದ ನಾಯ್ಕ ಹಡೀನ್ ಹಾಗು ಇತರರು ಇದ್ದರು.







