ಒಪ್ಪಂದದ ಮೂಲ ಬೆಲೆಗೆ ಟ್ವಿಟರ್ ಖರೀದಿಗೆ ಸಿದ್ಧ: ಎಲಾನ್ ಮಸ್ಕ್

ವಾಷಿಂಗ್ಟನ್, ಅ.5: 44 ಶತಕೋಟಿ ಡಾಲರ್ಗೆ ಟ್ಟಿಟರ್ ಖರೀದಿಸಲು ಈ ವರ್ಷದ ಆರಂಭದಲ್ಲಿ ತಾನು ಸಹಿ ಹಾಕಿರುವ ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ಉದ್ಯಮಿ ಎಲಾನ್ ಮಸ್ಕ್ ಪತ್ರ ರವಾನಿಸಿರುವುದನ್ನು ಟ್ವಿಟರ್ ದೃಢಪಡಿಸಿದೆ. ಒಪ್ಪಂದದ ಮೂಲ ಬೆಲೆಗೆ ಟ್ವಿಟರ್ ಖರೀದಿಯ ಒಪ್ಪಂದ ಮುಂದುವರಿಸಲು ತಾನು ಸಿದ್ಧವಿರುವ ಬಗ್ಗೆ ಟ್ವಿಟರ್ಗೆ ಲಿಖಿತವಾಗಿ ತಿಳಿಸಿದ್ದೇನೆ ಎಂದು ಟೆಸ್ಲಾ ಮುಖ್ಯಸ್ಥ ಮಸ್ಕ್ ‘ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಗ್ ಕಮಿಷನ್’ಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಮಸ್ಕ್ ವಿರುದ್ಧ ಟ್ವಿಟರ್ ಹೂಡಿರುವ ಕಾನೂನು ಸಮರಕ್ಕೆ ಅನಿರೀಕ್ಷಿತ ತಿರುವು ಲಭಿಸಿದೆ. ಒಪ್ಪಂದಕ್ಕೆ ಬದ್ಧ ಎಂಬ ಮಸ್ಕ್ ಹೇಳಿಕೆಯ ಬಳಿಕ ಟ್ವಿಟರ್ನ ಶೇರುಗಳ ಮೌಲ್ಯದಲ್ಲಿ ಏರಿಕೆ ಕಂಡಿದೆ.
ತನ್ನ ವಿರುದ್ಧದ ಮೊಕದ್ದಮೆ ಕ್ರಮವನ್ನು ಅಂತ್ಯಗೊಳಿಸಬೇಕು ಎಂಬ ಷರತ್ತನ್ನು ಮಸ್ಕ್ ಉಲ್ಲೇಖಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವ ರದಿ ಮಾಡಿದೆ. ಪ್ರತೀ ಶೇರಿಗೆ 54.20 ಡಾಲರ್ಗೆ ಒಪ್ಪಿದ ಬೆಲೆಯಲ್ಲಿ ಖರೀದಿ ಒಪ್ಪಂದವನ್ನು ಅಂತಿಮಗೊಳಿಸಲು ಉದ್ದೇಶಿಸಿರುವುದಾಗಿ ಟ್ವಿಟರ್ ಹೇಳಿದೆ.





