ಉತ್ಪಾದನೆ ಕಡಿತ ಘೋಷಿಸಿದ ಒಪೆಕ್, ರಷ್ಯಾ: ತೈಲ ಬೆಲೆ ಏರಿಕೆ

ಲಂಡನ್: ಒಪೆಕ್ ಮತ್ತು ರಷ್ಯಾ ನೇತೃತ್ವದ ಒಕ್ಕೂಟ ತೈಲ ಉತ್ಪಾದನೆ ಕಡಿತವನ್ನು ಘೋಷಿಸಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗಿದೆ ಎಂದು ndtv.com ವರದಿ ಮಾಡಿದೆ.
ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಡಾಲರ್ ಎದುರು ಪೌಂಡ್ ಮೌಲ್ಯ ಮತ್ತಷ್ಟು ಕುಸಿದಿದ್ದು, ಶೇಕಡ 2ರಷ್ಟು ಕುಸಿದ ಬಳಿಕ ಪೌಂಡ್ ಮೌಲ್ಯ 1.13 ಡಾಲರ್‍ನಷ್ಟಾಗಿದೆ. ವಿಯೆನ್ನಾದಲ್ಲಿ ಒಪೆಕ್‍ನ 13 ಸದಸ್ಯ ದೇಶಗಳ ಸಚಿವರು ಮತ್ತು ರಷ್ಯಾ ನೇತೃತ್ವದ ಹತ್ತು ದೇಶಗಳ ಕೂಟ ನಿರ್ಧಾರ ಪ್ರಕಟಿಸಿ, ನವೆಂಬರ್‌ನಿಂದ ತೈಲ ಉತ್ಪಾದನೆಯನ್ನು ಪ್ರತಿದಿನ ಸುಮಾರು 20 ಲಕ್ಷ ಬ್ಯಾರಲ್‍ನಷ್ಟು ಕಡಿಮೆ ಮಾಡುವುದಾಗಿ ಘೋಷಿಸಿವೆ.
2020ರ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಘೋಷಿಸಿದ ಉತ್ಪಾದನೆ ಕಡಿತದ ಬಳಿಕ ಘೋಷಿಸಿರುವ ಅತಿ ದೊಡ್ಡ ಕಡಿತ ಇದಾಗಿದೆ. ಇದು ಎಲ್ಲೆಡೆ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಲಿದ್ದು, ಜಾಗತಿಕ ಆರ್ಥಿಕ ಹಿಂಜರಿತ ತಡೆಯುವ ನಿಟ್ಟಿನಲ್ಲಿ ಕೇಂದ್ರೀಯ ಬ್ಯಾಂಕ್‍ಗಳು ಬಡ್ಡಿದರವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ತೈಲ ಬೆಲೆ ಇದೀಗ ಉಕ್ರೇನ್ ಯುದ್ಧದ ಪೂರ್ವದ ಅವಧಿಗೆ ಕುಸಿದಿದೆ. ಆದರೆ ಉತ್ಪಾದನೆ ಕಡಿತ ಘೋಷಣೆ ಸಾಧ್ಯತೆ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮತ್ತೆ ಏರಿಕೆ ಕಂಡಿತ್ತು. ಈ ನಿರ್ಧಾರದ ಬಳಿಕ ಪ್ರಮುಖ ಅಂತರರಾಷ್ಟ್ರೀಯ ಕಚ್ಚಾ ತೈಲ ಗುತ್ತಿಗೆದಾರ ಕಂಪನಿ ಬ್ರೆಂಟ್, ಶೇಕಡ 2ರಷ್ಟು ಬೆಲೆ ಹೆಚ್ಚಳ ಘೋಷಿಸಿದೆ ಎಂದು ndtv.com ವರದಿ ಮಾಡಿದೆ.