ಅಮೆರಿಕ: ಅಪಹರಣಕ್ಕೀಡಾಗಿದ್ದ 8 ತಿಂಗಳ ಮಗು ಸೇರಿದಂತೆ ಭಾರತ ಮೂಲದ ಕುಟುಂಬದ ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Photo: Facebook/MercedSheriffOffice
ಹೊಸದಿಲ್ಲಿ: ಹಲವು ದಿನಗಳಿಂದ ನಾಪತ್ತೆಯಾಗಿದ್ದ ಎಂಟು ತಿಂಗಳ ಮಗು ಸೇರಿದಂತೆ ಅಮೆರಿಕದಲ್ಲಿರುವ ಭಾರತೀಯ ಮೂಲದ ಕುಟುಂಬದ ನಾಲ್ವರು ಕ್ಯಾಲಿಫೋರ್ನಿಯಾದ ಹಣ್ಣಿನ ತೋಟದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
8 ತಿಂಗಳ ಮಗು ಅರೂಹಿ ಧೇರಿ ಹಾಗೂ ಮಗುವಿನ ಪೋಷಕರಾದ 27 ವರ್ಷದ ಜಸ್ಲೀನ್ ಕೌರ್ ಹಾಗೂ 36 ವರ್ಷದ ಜಸ್ದೀಪ್ ಸಿಂಗ್ ಸೋಮವಾರ ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಿಂದ ಅಪಹರಿಸಲ್ಪಟ್ಟಿದ್ದರು. ಮರ್ಸಿಡ್ ಕೌಂಟಿ ಪೊಲೀಸರ ಪ್ರಕಾರ ಮಗುವಿನ ಚಿಕ್ಕಪ್ಪ 39 ವರ್ಷದ ಅಮನದೀಪ್ ಸಿಂಗ್ ಕೂಡ ಅಪಹರಿಸಲ್ಪಟ್ಟಿದ್ದರು.
ನಾಲ್ವರ ಶವಗಳು ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಬಳಿಯ ಹಣ್ಣಿನ ತೋಟದಲ್ಲಿ ಬುಧವಾರ ಸಂಜೆ ಪತ್ತೆಯಾಗಿವೆ ಎಂದು ಮರ್ಸಿಡ್ ಕೌಂಟಿ ಶೆರಿಫ್ ವೆರ್ನ್ ವಾರ್ನ್ಕೆ ಹೇಳಿದ್ದಾರೆ.
ತೋಟದ ಬಳಿಯ ರೈತ ಕಾರ್ಮಿಕರು ಶವಗಳನ್ನು ನೋಡಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ನ ಹೋಶಿಯಾರ್ಪುರದ ಹರ್ಸಿ ಪಿಂಡ್ ಮೂಲದ ಕುಟುಂಬವನ್ನು ಅಪಹರಿಸಿದ ಕ್ಷಣವನ್ನು ತೋರಿಸುವ ವೀಡಿಯೊವನ್ನು ಬುಧವಾರ, ಪೊಲೀಸರು ಬಿಡುಗಡೆ ಮಾಡಿದ್ದರು. ಜಸ್ದೀಪ್ ಹಾಗೂ ಅಮನದೀಪ್ ಕೈಗಳನ್ನು ಒಟ್ಟಿಗೆ ಕಟ್ಟಿರುವ ದೃಶ್ಯ ವೀಡಿಯೊದಲ್ಲಿ ಕಂಡುಬಂದಿದೆ. ಕುಟುಂಬದ ಎಲ್ಲಾ ನಾಲ್ಕು ಸದಸ್ಯರನ್ನು ಟ್ರಕ್ನಲ್ಲಿ ಕರೆದೊಯ್ಯಲಾಗಿತ್ತು