108 ಆಂಬ್ಯುಲೆನ್ಸ್ ಸಿಬ್ಬಂದಿ ವೇತನ ವಿಚಾರ | ರಾಜ್ಯ ಸರಕಾರದಿಂದ ಜಿವಿಕೆ ಸಂಸ್ಥೆಗೆ ಹಣ ಪಾವತಿ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ಅ.6: ರಾಜ್ಯ ಸರಕಾರದಿಂದ 108 ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿರುವ ಜಿವಿಕೆ ಸಂಸ್ಥೆಗೆ ಹಣ ಪಾವತಿ ಆಗಿದೆ. ಒಪ್ಪಂದದ ಪ್ರಕಾರ ಸಂಸ್ಥೆಯೆ ಸಿಬ್ಬಂದಿಗೆ ವೇತನ ನೀಡಬೇಕು. ಒಂದು ವೇಳೆ ಸಿಬ್ಬಂದಿಗೆ ವೇತನ ನೀಡದಿದ್ದರೆ, ಸಂಸ್ಥೆಯವರು ಹಾಗೂ ಸಿಬ್ಬಂದಿ ಕಡೆಯವರನ್ನು ಕರೆಸಿ ನಾಳೆ(ಶುಕ್ರವಾರ) ಸಭೆ ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಗುರುವಾರ ಬಿಬಿಎಂಪಿ ವ್ಯಾಪ್ತಿಯ ಮಹಾಲಕ್ಷ್ಮಿಲೇಔಟ್‍ನ ಪಂಚಮುಖಿ ದೇವಸ್ಥಾನದ ಸಮೀಪ ರೂಪಿಸಿರುವ ‘ನಮ್ಮ ಕ್ಲಿನಿಕ್’ ಮಾದರಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ 16 ವರ್ಷದಿಂದ ಜಿವಿಕೆ ಸಂಸ್ಥೆ ಆಂಬ್ಯುಲೆನ್ಸ್ ಸೇವೆ ನೀಡುತ್ತಿದೆ. ಆದರೆ, ಈ ಸಂಸ್ಥೆಯಿಂದ ನಿರೀಕ್ಷಿತ ಸೇವೆ ದೊರೆಯತ್ತಿಲ್ಲ. ಅವರ ಟೆಂಡರ್ ಅವಧಿ ಮುಕ್ತಾಯವಾಗಿದ್ದರೂ ಕೋರ್ಟ್ ಆದೇಶದಂತೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಹೊಸ ಆಂಬ್ಯುಲೆನ್ಸ್ ಟೆಂಡರ್ ಅಂತಿಮಗೊಳ್ಳುತ್ತಿದ್ದು, ಎರಡು ತಿಂಗಳೊಳಗೆ ಮುಗಿಯಲಿದೆ ಎಂದು ಸುಧಾಕರ್ ಹೇಳಿದರು.
ಬೈಕ್ ಆಂಬ್ಯುಲೆನ್ಸ್ ಅನಗತ್ಯವೆಂದು ಸಮಿತಿ ವರದಿ ನೀಡಿರುವುದರಿಂದ ಹೊಸ ಟೆಂಡರ್‍ನಲ್ಲಿ ಈ ಪ್ರಸ್ತಾಪ ಕೈ ಬಿಡಲಾಗಿದೆ. ಆದರೂ ಅಂಗಾಂಗ ದಾನದ ಸಂದರ್ಭ, ರೋಗಿಗಳ ವರ್ಗಾವಣೆಗೆ ಏರ್ ಆಂಬ್ಯುಲೆನ್ಸ್ ಪರಿಚಯಿಸಲು ಸರಕಾರ ಉದ್ದೇಶಿಸಿದೆ. ಈ ಸಂಬಂಧ ರೂಪುರೇಷೆಗಳು ಸಿದ್ಧವಾಗುತ್ತಿವೆ ಎಂದು ಅವರು ತಿಳಿಸಿದರು.
108 ಆಂಬ್ಯುಲೆನ್ಸ್ ಸೇವೆ ಎಂದಿನಂತೆ ಲಭ್ಯವಿರಲಿದೆ. ನಾಳೆ ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವುದೆ ಕಾರಣಕ್ಕೂ ತುರ್ತು ಸೇವೆ ನಿಲ್ಲಿಸದಂತೆ ಜಿವಿಕೆ ಸಂಸ್ಥೆಗೆ ತಿಳಿಸಲಾಗಿದೆ ಎಂದು ಸುಧಾಕರ್ ಹೇಳಿದರು.
ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್’ಗಳನ್ನು ನವೆಂಬರ್ ಅಂತ್ಯ ಅಥವಾ ಡಿ.15ರ ವೇಳೆಗೆ ಕಾರ್ಯಾರಂಭಿಸಲಾಗುವುದು. ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್‍ಗಳು ಆರಂಭವಾಗಲಿವೆ. ಒಂದು ಕ್ಲಿನಿಕ್‍ನಲ್ಲಿ ವೈದ್ಯ, ನಸಿರ್ಂಗ್ ಸಿಬ್ಬಂದಿ, ಲ್ಯಾಬ್ ಟೆಕ್ನೀಶಿಯನ್ ಹುದ್ದೆಗಳಿರುತ್ತವೆ ಎಂದು ಅವರು ಮಾಹಿತಿ ನೀಡಿದರು.
ಬಿಬಿಎಂಪಿ ವ್ಯಾಪ್ತಿಯ ಕ್ಲಿನಿಕ್‍ಗಳಿಗೆ ವೈದ್ಯರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, 160 ವೈದ್ಯರು ಈಗಾಗಲೇ ನೇಮಕ ಆಗಿದ್ದಾರೆ. ಉಳಿದ ಎಲ್ಲ ಸಿಬ್ಬಂದಿ ಹುದ್ದೆ ತುಂಬಿದೆ. ಬಾಕಿ ಉಳಿದ 83 ಹುದ್ದೆಗಳಿಗೆ ಮತ್ತೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಬಡತನ ರೇಖೆಗಿಂತ ಕೆಳಗಿರುವ ಜನರು, ಗುಡಿಸಲುಗಳಲ್ಲಿ ವಾಸಿಸುವ ಕಡು ಬಡವರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ ಇದು ಕಾರ್ಯ ನಿರ್ವಹಿಸಲಿದೆ. ಪ್ರತಿ ವಾರ್ಡ್‍ನಲ್ಲಿ ಒಂದು ಕ್ಲಿನಿಕ್ ಆರಂಭವಾಗುವುದರಿಂದ ಜನರಿಗೆ ಆರೋಗ್ಯ ಹಾಗೂ ಸರಕಾರಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಹೆಚ್ಚಲಿದೆ ಎಂದು ಸುಧಾಕರ್ ತಿಳಿಸಿದರು.
ಸರಕಾರಿ ಕಟ್ಟಡಗಳಲ್ಲಿ, ಬಾಡಿಗೆ ಕಟ್ಟಡಗಳಲ್ಲಿ 1,000-1,200 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಕ್ಲಿನಿಕ್ ರೂಪಿಸಲಾಗುತ್ತಿದೆ. ಪ್ರತಿ ವರ್ಷ ಸಿಬ್ಬಂದಿಗಾಗಿ 138 ಕೋಟಿ ರೂ. ವೆಚ್ಚವಾಗಲಿದೆ. ನಾನ್ ರಿಕರಿಂಗ್ 17.52 ಕೋಟಿ ರೂ. ಸೇರಿ ಒಟ್ಟು 155 ಕೋಟಿ ರೂ. ವೆಚ್ಚವಾಗಲಿದೆ. ಯೋಗ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ಧತಿ ಮೊದಲಾದವುಗಳ ಕುರಿತು ಕ್ಲಿನಿಕ್ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡುವ ಅಭಿಯಾನ ಮಾಡಲಾಗುತ್ತಿದೆ. 30 ವರ್ಷ ಮೇಲ್ಪಟ್ಟ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಆಹಾರ ಸುರಕ್ಷತಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಮ್‍ಗಳಲ್ಲಿ ಬಳಸುವ ಪೌಡರ್ ಬಗ್ಗೆ ಮಾಹಿತಿ ಕಲೆಹಾಕಲು ಸೂಚಿಸಲಾಗಿದೆ. ಆಹಾರದಲ್ಲಿ ಗುಣಮಟ್ಟ ಇಲ್ಲದಿದ್ದರೆ, ಅನುಮತಿ ಇಲ್ಲದಿದ್ದರೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.