ಕಾಂಗ್ರೆಸ್ ನೆಲ ಕಚ್ಚಿದ ಮೇಲೆ ಖರ್ಗೆಗೆ ಸ್ಥಾನ: ಕುಮಾರಸ್ವಾಮಿ

ಬೆಂಗಳೂರು: 'ಯಾರು ಇಲ್ಲದ ಸಂದರ್ಭದಲ್ಲಿ, ಪಕ್ಷ ನೆಲ ಕಚ್ಚಿರುವ ವೇಳೆ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಅವರನ್ನು ಕೂರಿಸಲು ಹೊರಟಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಗುರುವಾರ ನಗರದಲ್ಲಿರುವ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಿದಾಗ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದು ರಾಹುಲ್ ಗಾಂಧಿ ನಗಾರಿ ಬಾರಿಸಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋಗಿ ಅಂತ ಪದೇ ಪದೇ ಹೇಳುತ್ತಿದ್ದಾರೆ. ಈ ಪಾದಯಾತ್ರೆ ಮೇಲೆ ಚುನಾವಣೆ ನಡೆಯಲ್ಲ ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯದಲ್ಲಿ 15-20 ಕ್ಷೇತ್ರಗಳ ಮೇಲೆ ಕೆಸಿಆರ್ ಪ್ರಭಾವ ಇರಬಹುದು. ಹೈದರಾಬಾದ್ ಕರ್ನಾಟಕದಲ್ಲಿ ನಾವು ನಾಲ್ಕು ಸ್ಥಾನ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ ನಾವು 15-20 ಕ್ಷೇತ್ರ ಕಲ್ಯಾಣ ಕರ್ನಾಟಕದಲ್ಲಿ ಗೆಲ್ಲಬಹುದು. ಅಲ್ಲಿ ನಮ್ಮ ಪಕ್ಷದ ಸಂಘಟನೆ ಉತ್ತಮವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.