'ಭಾರತ್ ಜೋಡೋ' ಯಾತ್ರೆಗೆ ಸೋನಿಯಾ ಗಾಂಧಿ ಪ್ರವೇಶದಿಂದ BJP ವಿಚಲಿತ: ರಣದೀಪ್ಸಿಂಗ್ ಸುರ್ಜೆವಾಲಾ

ಮಂಡ್ಯ, ಅ.6: ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪ್ರವೇಶದಿಂದಾಗಿ ಬಿಜೆಪಿ ಸರಕಾರ ಮತ್ತು ಮುಖಂಡರು ಮತ್ತಷ್ಟು ವಿಚಲಿತರಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ಟೀಕಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ಖರಡ್ಯ ಬಳಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾತ್ರೆ ಹತ್ತಿಕ್ಕಲು ರಾಹುಲ್ ಗಾಂಧಿ ಅವರ ಸಿಬ್ಬಂದಿ ಹಾಗೂ ಪತ್ರಕರ್ತ ಮಿತ್ರರ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಯಾತ್ರೆ ಯಶಸ್ಸು ಪಡೆಯುತ್ತಿರುವುದನ್ನು ಕಂಡು ಕಾಂಗ್ರೆಸ್ ಪೋಸ್ಟರ್ ಕಿತ್ತುಹಾಕುವುದು, ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು, ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡುವುದನ್ನು ಮಾಡುವ ಮೂಲಕ ತಮ್ಮ ಹತಾಷೆ ತೋರ್ಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಇಂತಹ ಕುಕೃತ್ಯಗಳಿಂದ ಯಾತ್ರೆ ತಡೆಯುವುದಾಗಲಿ, ಕಾಂಗ್ರಸ್ ನಾಯಕರ ಮತ್ತು ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ ಎಂದು ಅವರು ತಿರುಗೇಟು ನೀಡಿದರು.
ರಾಹುಲ್ ಗಾಂಧಿ ಮತ್ತು ಸಾವಿರಾರು ಜನರ ಜತೆ ಸೇರಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಅವರು ಪಾಲ್ಗೊಂಡು ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ಇದು ದೇಶದ ಜನಸಾಮಾನ್ಯರ ಬಗೆಗಿನ ಅವರ ಕಾಳಜಿ ತೋರುತ್ತದೆ. ಇದರಿಂದ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ಮೂಡಿದೆ ಎಂದು ಅವರು ಹೇಳಿದರು.
ರಣದೀಪ್ಸಿಂಗ್ ಸುರ್ಜೆವಾಲಾ
ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಜಾರಿ ಮಾಡುವ ಮೂಲಕ ಸರಕಾರ ಪರಿಶಿಷ್ಟರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ತಾಕೀತು ಮಾಡಿದ ಅವರು, ಈ ವಿಷಯದಲ್ಲಿ ಮತ್ತೊಂದು ಸಮಿತಿ ರಚಿಸುತ್ತೇವೆಂದು ಮುಖ್ಯಮಂತ್ರಿ ಹೇಳುವ ಮೂಲಕ ಪರಿಶಿಷ್ಟರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಸೋನಿಯಾ ಗಾಂಧಿ ಅವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ನಮಗೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದವರು ರಾಹುಲ್ ಗಾಂಧಿ ಜತೆ ಮಾತನಾಡಿ, ಹಳ್ಳಿಗಳಲ್ಲಿ ಸಾಲಭಾಧೆ, ಬಡ್ಡಿ, ಚಕ್ರಬಡ್ಡಿ ಹೊರೆ ವಿಚಾರವಾಗಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ ಎಂದರು.
ಪಾದಯಾತ್ರೆ ಹಿನ್ನೆಲೆಯಲ್ಲಿ ಯಂಗ್ ಇಂಡಿಯಾ ಟ್ರಸ್ಟ್, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಸಮಯ ಕೋರಿದ್ದು, ನಿರಾಕರಿಸಲಾಗಿದೆ. ಈ ಬಗ್ಗೆ ನಾಯಕರ ಜತೆ ಚರ್ಚೆ ಮಾಡಿದ್ದು, ನಾಳೆ ಬೆಳಗ್ಗೆ 10:30ಕ್ಕೆ ನಾನು ಮತ್ತು ನನ್ನ ಸಹೋದರ ಡಿ.ಕೆ.ಸುರೇಶ್ ಹಾಜರಾಗುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾಗಮೋಹನ್ ದಾಸ್ ಸಮಿತಿ ವರದಿ ಜಾರಿ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಆದರೆ, ಈ ಸಂಬಂಧ ನಾಳೆ ಸರ್ವಪಕ್ಷ ಸಭೆಯನ್ನು ಮುಖ್ಯಮಂತ್ರಿಗಳು ಕರೆದಿದ್ದಾರೆ. ನಾವು ಸಾಮಾಜಿಕ ನ್ಯಾಯದ ಪರವಾಗಿದ್ದು, ಮೀಸಲಾತಿ ಹೆಚ್ಚಳ ಆಗಬೇಕು ಎಂಬುದು ನಮ್ಮ ನಿಲುವು. ಇದನ್ನು ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.