ದೇವರ ಉತ್ಸವ ವಿಚಾರ: ಕೋಲಾರದ ದಾನವಹಳ್ಳಿಯಲ್ಲಿ ದಲಿತರು -ಸವರ್ಣೀಯರ ನಡುವೆ ಗುಂಪು ಘರ್ಷಣೆ
8 ಮಂದಿ ವಿರುದ್ಧ ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು ► 6 ಮಂದಿ ಆಸ್ಪತ್ರೆಗೆ ದಾಖಲು
ಶಾಂತಿಸಭೆ ನಡೆಸಿದ ಪೊಲೀಸರು
ಕೋಲಾರ, ಅ.6: ದೇವರ ಉತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತರು -ಸವರ್ಣೀಯರ ನಡುವೆ ಗುಂಪು ಘರ್ಷಣೆ ನಡೆದಿರುವ ಘಟನೆ ಕೋಲಾರ ತಾಲೂಕಿನ ವೇಮಗಲ್ ಠಾಣಾ ವ್ಯಾಪ್ತಿಯ ದಾನವಹಳ್ಳಿಯಲ್ಲಿ ವರದಿಯಾಗಿದೆ.
ಗಂಗಮ್ಮ ಮತ್ತು ಕಾಟೇರಮ್ಮ ದೇವಿಯ ಉತ್ಸವಕ್ಕಾಗಿ ಗ್ರಾಮದಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದೆ. ದಲಿತರು ಬೀದಿಗಳಿಗೆ ದೇವರ ಉತ್ಸವ ಬರುವುದಿಲ್ಲ. ನಮಗೆ ದೇವರ ಉತ್ಸವವನ್ನು ಹೊರಲು ಅವಕಾಶ ಕೇಳಿದ್ದಾರೆ ಹಾಗೂ ನಮ್ಮ ಬೀದಿಗೂ ಗ್ರಾಮದೇವತೆಯ ಉತ್ಸವ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಈ ವೇಳೆ ದಲಿತರು -ಸವರ್ಣೀಯರ ನಡುವೆ ಮಾತಿಗೆ ಮಾತು ಬೆಳೆದು ಇಟ್ಟಿಗೆ, ದೊಣ್ಣೆಗಳಿಂದ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ಸಂಬಂಧ 8 ಮಂದಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಗಲಾಟೆಯಲ್ಲಿ ಎರಡೂ ಗುಂಪುಗಳ 6 ಜನರು ಗಾಯಗೊಂಡು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ವೇಮಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಗ್ರಾಮದಲ್ಲಿ ಯಾವುದೇ ಘಟನೆಗಳು ನಡೆಯದಂತೆ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಠಿಣ ಕ್ರಮಗಳನ್ನು ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ ಎನ್ನಲಾಗಿದೆ.
ಶಾಂತಿ ಸಭೆ: ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ತಹಶೀಲ್ದಾರ್ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪನೇತೃತ್ವದಲ್ಲಿ ಗುರುವಾರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮಸ್ಥರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ಮುರಳೀದರ್, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಬೆಳಮಾರನಹಳ್ಳಿ ಆನಂದ್, ಗ್ರಾಮದ ಬೈರಪ್ಪ, ರೈತ ಮುಖಂಡರಾದ ರಾಮು, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.