ಹವಾಮಾನ ಬದಲಾವಣೆಯಿಂದ ಬರಗಾಲದ ಸಾಧ್ಯತೆ 20 ಪಟ್ಟು ಹೆಚ್ಚು: ವರದಿ

Photo : NDTV
ಪ್ಯಾರಿಸ್, ಅ.6: ಮಾನವ ಪ್ರೇರಿತ ಹವಾಮಾನ ಬದಲಾವಣೆಯು ಈ ಬೇಸಿಗೆಯಲ್ಲಿ ಉತ್ತರ ಗೋಳಾರ್ಧದಲ್ಲಿ ಬರಗಾಲ ಸಂಭವಿಸುವ ಸಾಧ್ಯತೆಯನ್ನು ಕನಿಷ್ಟ 20 ಪಟ್ಟು ಹೆಚ್ಚಿಸಿದೆ ಎಂದು ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡದ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಜೂನ್ ಮತ್ತು ಆಗಸ್ಟ್ ಮಧ್ಯೆ ಯುರೋಪ್, ಚೀನಾ ಮತ್ತು ಉತ್ತರ ಅಮೆರಿಕಾದಲ್ಲಿ ಆವರಿಸಿರುವ ಬರಗಾಲವು ಪ್ರಸ್ತುತ ತಾಪಮಾನದ ಮಟ್ಟದಲ್ಲಿ ಪ್ರತೀ 20 ವರ್ಷಗಳಿಗೊಮ್ಮೆ ಸಂಭವಿಸುವ ಸಾಧ್ಯತೆಯಿದೆ. ಮಾನವ ನಿರ್ಮಿತ ತಾಪನವಿಲ್ಲದೆ , ಈ ಬೇಸಿಗೆಯಲ್ಲಿ ಬಂದಂತಹ ಉತ್ತರ ಗೋಳಾರ್ಧದ ಬರಗಾಲವು ಪ್ರತೀ 400 ವರ್ಷಕ್ಕೆ ಒಮ್ಮೆ ಮಾತ್ರ ಸಂಭವಿಸುತ್ತದೆ ’ ಎಂದು ‘ದಿ ವರ್ಲ್ಡ್ ವೆದರ್ ಅಟ್ರಿಬ್ಯೂಷನ್ ಸರ್ವಿಸ್’ನ ವರದಿ ಹೇಳಿದೆ.
ಜಾಗತಿಕ ತಾಪಮಾನಕ್ಕೆ ವೈಯಕ್ತಿಕ ಹವಾಮಾನ ಘಟನೆಗಳು ಎಷ್ಟು ನಿಕಟ ಸಂಬಂಧ ಹೊಂದಿವೆ ಎಂಬುದನ್ನು ಈ ಸಂಸ್ಥೆ ಲೆಕ್ಕಾಚಾರ ಮಾಡುತ್ತದೆ. ಮಾನವ ಪ್ರೇರಿತ ಬದಲಾವಣೆಯು ಉತ್ತರ ಗೋಳಾರ್ಧದ ಜನನಿಬಿಡ ಮತ್ತು ಕೃಷಿ ಪ್ರದೇಶಗಳಲ್ಲಿ ಕೃಷಿ ಮತ್ತು ಪರಿಸರ ಬರಗಳ ಅಪಾಯವನ್ನು ಹೇಗೆ ಹೆಚ್ಚಿಸಿದೆ ಎಂಬುದನ್ನು 2022ರ ಬೇಸಿಗೆ ತೋರಿಸಿಕೊಟ್ಟಿದೆ ಎಂದು ಅಧ್ಯಯನ ತಂಡದಲ್ಲಿದ್ದ ಸ್ವಿಝರ್ಲ್ಯಾಂಡ್ನ ‘ಇನ್ಸ್ಟಿಟ್ಯೂಟ್ ಆಫ್ ಅಟ್ಮೊಸ್ಫೆರಿಕ್ ಆ್ಯಂಡ್ ಕ್ಲೈಮೇಟ್ ಸೈಯನ್ಸ್’ನ ಪ್ರೊಫೆಸರ್ ಸೋನಿಯಾ ಸಿನೆವಿರತ್ನೆ ಹೇಳಿದ್ದಾರೆ.







