ಹಿಂದುತ್ವ ಶಕ್ತಿಗಳು ತಮಿಳು ಅಸ್ಮಿತೆಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿವೆ: ನಿರ್ದೇಶಕ ವೆಟ್ರಿಮಾರನ್

ನಿರ್ದೇಶಕ ವೆಟ್ರಿಮಾರನ್ (Photo: Twitter/@rajaduraikannan)
ಚೆನ್ನೈ: ಹಿಂದುತ್ವ ಶಕ್ತಿಗಳು ತಮಿಳು(Tamil) ಅಸ್ಮಿತೆಯ ಲಾಭ ಪಡೆದುಕೊಳ್ಳಲು ಸತತ ಯತ್ನಿಸುತ್ತಿವೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕರಾದ ವೆಟ್ರಿಮಾರನ್ (Director Vetrimaaran) ಅವರು ತಮ್ಮ ಇತ್ತೀಚಿಗಿನ ಭಾಷಣವೊಂದರಲ್ಲಿ ಹೇಳಿರುವುದು ವಿವಾದಕ್ಕೀಡಾಗಿದೆ. ಈ ಅಭಿಪ್ರಾಯವನ್ನು ಖ್ಯಾತ ನಟ ಕಮಲ್ ಹಾಸನ್ ಬೆಂಬಲಿಸಿದ್ದರೆ, ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಪ್ರತಿಕ್ರಿಯಿಸಿ ಇದು ಸಾಂಸ್ಕೃತಿಕ ಅಸ್ಮಿತೆಯನ್ನು ಅಡಗಿಸುವ ಯತ್ನ ಎಂದು ಆರೋಪಿಸಿದ್ದಾರೆ.
ಕಳೆದ ಶನಿವಾರ ವೆಟ್ರಿಮಾರನ್ ಅವರು ಸಂಸದ ಹಾಗೂ ವಿದುತಲೈ ಚಿರುತೈಗಲ್ ಕಚ್ಚಿ ನಾಯಕ ತೋಳ್ ತಿರುಮಾವಲವನ್ ಅವರ 60 ನೇ ಹುಟ್ಟುಹಬ್ಬ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೇಲಿನ ಮಾತುಗಳನ್ನು ಹೇಳಿದ್ದರು ಎಂದು thehindu.com ವರದಿ ಮಾಡಿದೆ.
ರಾಜ ರಾಜ ಚೋಳನನ್ನು 'ಹಿಂದು ಅರಸ' ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸುತ್ತಿರುವುದನ್ನು ಗಮನಿಸಿ ಅವರು ಈ ಮಾತುಗಳನ್ನು ಹೇಳಿದ್ದರು.
"ಕಲೆಯನ್ನು ರಾಜಕೀಯದಿಂದ ದೂರವಿರಿಸಬೇಕು, ನಾವು ತಮಿಳರು ಇದನ್ನು ಸರಿಯಾಗಿ ನಿಭಾಯಿಸಬೇಕು, ಹಾಗೆ ಮಾಡದೇ ಇದ್ದರೆ ನಮ್ಮ ಚಿಹ್ನೆಗಳನ್ನು ಅವರು ತಮ್ಮ ಲಾಭಕ್ಕಾಗಿ ಬಳಸುತ್ತಾರೆ,'' ಎಂದು ತಮಿಳು ಕವಿ ತಿರುವಲ್ಲುವರ್ ಅವರನ್ನು ಕೇಸರಿ ವಸ್ತ್ರಗಳಲ್ಲಿ ತೋರಿಸುವುದು ಹಾಗೂ ರಾಜ ರಾಜ ಚೋಳನನ್ನು ಹಿಂದು ಅರಸ ಎಂದು ಬಿಂಬಿಸುವ ಕುರಿತು ಹೇಳಿದ್ದರು.
'ಇದು ಸತತ ನಡೆಯುತ್ತಿದೆ ಅವರು ಸಿನೆಮಾವನ್ನು ಸಾಧನವಾಗಿ ಬಳಸುತ್ತಾರೆ. ನಾವು ರಾಜಕೀಯವಾಗಿ ಜಾಗೃತವಾಗಬೇಕು,'' ಎಂದು ಅವರು ಹೇಳಿದರು.
ಅವರ ಈ ಮಾತುಗಳನ್ನು ಹಿಂದುತ್ವ, ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳು ವಿರೋಧಿಸಿದರೆ, ದ್ರಾವಿಡರು ಸೇರಿದಂತೆ ಹಲವರು ಅವರನ್ನು ಬೆಂಬಲಿಸಿದ್ದರು.
ರಾಜ ರಾಜ ಚೋಳನ ಜೀವನಾಧರಿತ ಮಣಿರತ್ನಂ ಅವರ ಚಿತ್ರ ಪೊನ್ನಿಯನ್ ಸೆಲ್ವನ್ 1 ಇದರ ತಾರಾಗಣಕ್ಕೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ ಹಾಸನ್ `ಚೋಳ ಅರಸನ ಕಾಲದಲ್ಲಿ ಹಿಂದು ಧರ್ಮವಿರಲಿಲ್ಲ, ಆದರೂ ಬ್ರಿಟಿಷರು ತಮ್ಮ ಪ್ರಯೋಜನಕ್ಕಾಗಿ ಹಾಗೆ ಹೇಳಿದ್ದರು. ಆಗ ವೈನವಂ, ಸೈವಂ ಮತ್ತು ಸಮಾನಂ ಇತ್ತು,'' ಎಂದು ಹೇಳಿದರು.
ಆದರೆ ವೆಟ್ರಿಮಾರನ್ ಅವರ ಹೇಳಿಕೆ ಸಾಂಸ್ಕೃತಿಕ ಅಸ್ಮಿತೆಯನ್ನು ಅಡಗಿಸುವ ಯತ್ನ ಅದನ್ನು ವಿರೋಧಿಸಬೇಕು ಎಂದು ತಮಿಳುನಾಡಿನ ಮಾಜಿ ರಾಜ್ಯಪಾಲೆಯೂ ಆಗಿರುವ ತಮಿಳಿಸೈ ಸೌಂದರರಾಜನ್ ಹೇಳಿದ್ದಾರೆ.
ಮಣಿರತ್ನಂ ಅವರ ಪೊನ್ನಿಯನ್ ಸೆಲ್ವಂನಲ್ಲಿ ರಾಜ ರಾಜ ಚೋಳನನ್ನು ಹಿಂದು ಅರಸನಂತೆ ಬಿಂಬಿಸಿರುವುದು ವೆಟ್ರಿಮಾರನ್ ಹೇಳಿಕೆಯಿಂದ ಇನ್ನಷ್ಟು ವಿವಾದಕ್ಕೀಡಾಗುವಂತೆ ಮಾಡಿದೆ.







