ಸುರತ್ಕಲ್ ಟೋಲ್ ತೆರವಿಗಾಗಿ ಅ.18ಕ್ಕೆ ಟೋಲ್ ಗೇಟ್ ಮುತ್ತಿಗೆ: ಕುಂದಾಪುರದಿಂದ ನೂರಾರು ಮಂದಿ ಭಾಗವಹಿಸಲು ನಿರ್ಧಾರ

ಕುಂದಾಪುರ, ಅ.7: ಕೇವಲ ಹತ್ತು ಕಿ.ಮೀ ಅಂತರದಲ್ಲಿ ಎರಡು ಕಡೆ ಟೋಲ್ ಸಂಗ್ರಹಿಸುವುದು ಹೆದ್ದಾರಿ ದರೋಡೆಗೆ ಸಮ. ಈ ರೀತಿ ಪ್ರಯಾಣಿಕರಿಂದ ಬಲವಂತವಾಗಿ ಟೋಲ್ ವಸೂಲಿ ಮಾಡುವುದು ನಿಯಮಗಳ ಉಲ್ಲಂಘನೆಯಾಗಿದೆ. ಸಾಕಷ್ಟು ಹೋರಾಟಗಳ ಬಳಿಕ ಇದೀಗ ಅ.18ರಂದು ಸುರತ್ಕಲ್ ಟೋಲ್‌ಗೇಟ್‌ನ್ನು ಮುಚ್ಚಿಸಲು ಟೋಲ್‌ಗೇಟ್‌ಗೆ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಕುಂದಾಪುರ ಕಾರ್ಮಿಕ ಭವನ ಸಭಾಂಗಣದಲ್ಲಿ ಶುಕ್ರವಾರ ಟೋಲ್ ಗೇಟ್ ಮುತ್ತಿಗೆ ಹೋರಾಟದ ಯಶಸ್ಸಿಗಾಗಿ ಹಮ್ಮಿಕೊಂಡ ಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಆರು ತಿಂಗಳ ತಾತ್ಕಾಲಿಕ ಅವಧಿಗೆಂದು ಪ್ರಾರಂಭಗೊಂಡ ಸುರತ್ಕಲ್ ಟೋಲ್‌ಗೇಟ್ ಜನರ ಪ್ರಬಲ ವಿರೋಧದ ಹೊರತಾಗಿಯೂ ಏಳು ವರ್ಷಗಳನ್ನು ಅಕ್ರಮವಾಗಿ ಪೂರೈಸಿದೆ. ಈ ಅವಧಿಯಲ್ಲಿ ಸುರತ್ಕಲ್, ಬಿ.ಸಿ. ರೋಡ್ ಹೆದ್ದಾರಿಯಲ್ಲಿ ಸುಂಕ ಸಂಗ್ರಹದ ಹೆಸರಿನಲ್ಲಿ ವಾಹನ ಸವಾರರಿಂದ ವಸೂಲಿ ಮಾಡಿದ ಮೊತ್ತ ಸರಿ ಸುಮಾರು 400 ಕೋಟಿ ರೂಪಾಯಿ. ಇಷ್ಟಾದರೂ ಆಳುವವರ ಹಣದ ದಾಹ ತಣಿಯುತ್ತಿಲ್ಲ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.
ಹೋರಾಟ ಸಮಿತಿಯ ಮುಖಂಡ ಕೊಳ್ಕೆಬೈಲ್ ಕಿಶನ್ ಹೆಗ್ಡೆ ಮಾತನಾಡಿ, ಟೋಲ್‌ಗೇಟ್ ಮುತ್ತಿಗೆ ಹೋರಾಟಕ್ಕೆ ಬಸ್ ಮಾಲಕರ ಸಂಘ ಸಂಪೂರ್ಣ ಬೆಂಬಲ ನೀಡುತ್ತದೆ. ಉಡುಪಿ ಜಿಲ್ಲೆಯ ಬಡ ಮದ್ಯಮ ವರ್ಗದ ಹಾಗೂ ಟ್ಯಾಕ್ಸಿ ಚಾಲಕರನ್ನು ಟೋಲ್‌ಗೇಟ್ ಹಿಂದಿರುವ ಶಕ್ತಿಗಳು ನಿರಂತರ ಶೋಷಿಸುತ್ತಿದೆ. ಈ ಶೋಷಣೆಯ ಅಂತ್ಯ ಹಾಡಲು ನೂರಾರು ಮಂದಿ ಜಿಲ್ಲೆ ಯಿಂದ ಭಾಗವಹಿಸುವಂತೆ ಅವರು ಕರೆ ನೀಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಚಂದ್ರಶೇಖರ ವಿ., ರಮೇಶ್ ವಿ., ರಾಜು ದೇವಾಡಿಗ, ರವಿ ವಿ.ಎಂ., ದಲಿತ ಸಂಘರ್ಷ ಸಮಿತಿ ಮುಖಂಡ ನಾಗರಾಜ, ಶ್ರೀನಿವಾಸ ಮಲ್ಯಾಡಿ, ಶ್ರೀನಾಥ ಕುಲಾಲ್, ಗಣೇಶ ಮೆಂಡನ್, ಬಾಲಕೃಷ್ಢ ಎಂ., ವೆಂಕಟೇಶ್ ಕೋಣಿ ಮತ್ತು ಇತರ ಸಮಾನ ಮನಸ್ಕ ಸಂಘಟನೆ ಗಳ ಮುಖಂಡರು ಉಪಸ್ಥಿತರಿದ್ದರು.
ಟೋಲ್‌ಗೇಟ್ ಮುತ್ತಿಗೆ ನೇರ ಕಾರ್ಯಾಚರಣೆಯ ಅಂಗವಾಗಿ ಕುಂದಾಪುರ ಪೇಟೆಯಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಜಾಥಾ ನಡೆಸಲು ನಿರ್ಧರಿಸಲಾಯಿತು. ಇಂಟಕ್ ಮುಖಂಡ ಲಕ್ಷ್ಮಣ ಶೆಟ್ಟಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.






.jpeg)


