ಅಕ್ರಮ ಹಣ ವರ್ಗಾವಣೆ ಪ್ರಕರಣ: ಈಡಿ ವಿಚಾರಣೆಗೆ ಹಾಜರಾದ ಶಿವಕುಮಾರ್

ಡಿ.ಕೆ. ಶಿವಕುಮಾರ್ (Photo: Twitter/@ANI)
ಹೊಸದಿಲ್ಲಿ: ನ್ಯಾಶನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಜಾರಿ ನಿರ್ದೇಶನಾಲಯದ(ಈಡಿ) ವಿಚಾರಣೆಗೆ ಶುಕ್ರವಾರ ಹಾಜರಾಗಿದ್ದಾರೆ.
ಈ.ಡಿ. ಕಚೇರಿಗೆ ತೆರಳುವ ಮೊದಲು ಮಾಧ್ಯಮದವರ ಜೊತೆ ಮಾತನಾಡಿದ ಡಿಕೆಶಿ, ನಾನು ಕಾನೂನನ್ನು ಗೌರವಿಸುವ ನಾಗರಿಕ ಎಂದರು.
ಕಳೆದ ಸೆಪ್ಟಂಬರ್ 19ರಂದು ಈ.ಡಿ. ಮುಂದೆ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದರು. ಆ ಸಂದರ್ಭ ಅಕ್ರಮ ಹಣ ವರ್ಗಾವಣೆ ಕುರಿತ ಮತ್ತೊಂದು ಪ್ರಕರಣದ ಕುರಿತು ವಿಚಾರಣೆ ನಡೆಸಲಾಗಿತ್ತು.
ನ್ಯಾಶನಲ್ ಹೆರಾಲ್ಡ್ ಮಾಲಿಕತ್ವದ ಯಂಗ್ ಇಂಡಿಯ ಸಂಸ್ಥೆಗೆ ಹಣ ದೇಣಿಗೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ವಿಚಾರಣೆ ನಡೆಸಲಾಗುತ್ತಿದೆ.
ಪ್ರಸ್ತುತ ಕರ್ನಾಟಕದ ಮೂಲಕ ಹಾದು ಹೋಗುತ್ತಿರುವ ಕಾಂಗ್ರೆಸ್ನ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಭಾಗವಹಿಸುತ್ತಿರುವ ಶಿವಕುಮಾರ್, ಅಕ್ಟೋಬರ್ 21 ರವರೆಗೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ತನಿಖಾ ಸಂಸ್ಥೆಗೆ ಮನವಿ ಮಾಡಿದ್ದರು. ಆದರೆ ಸಂಬಂಧಪಟ್ಟ ಅಧಿಕಾರಿ ಶಿವಕುಮಾರ್ ಹಾಗೂ ಅವರ ಸಹೋದರ ಸುರೇಶ್ ಗೆ ಏಜೆನ್ಸಿಯ ಮುಂದೆ ಹಾಜರಾಗುವಂತೆ ಸೂಚಿಸಿದರು.







