ಗುಜರಾತ್ ನಲ್ಲಿ ಯುವಕರನ್ನು ಸಾರ್ವಜನಿಕವಾಗಿ ಥಳಿಸಿದ್ದು ಸ್ಥಳೀಯ ಪೊಲೀಸರು: ವರದಿ
ಗರ್ಬಾ ಕಾರ್ಯಕ್ರಮಕ್ಕೆ ಅಡ್ಡಿ ಆರೋಪ

Photo: ndtv.com
ಅಹಮದಾಬಾದ್: ಈ ವಾರದ ಆರಂಭದಲ್ಲಿ ಗುಜರಾತ್ (Gujarat) ನಲ್ಲಿ ಖೇಡಾದಲ್ಲಿ ನವರಾತ್ರಿ ಗರ್ಬಾ (Navratri Garba) ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಯುವಕರಿಗೆ ಸಾರ್ವಜನಿಕವಾಗಿ ಥಳಿಸಿದವರು ಸ್ಥಳೀಯ ಪೊಲೀಸರು ಎಂದು ಗುಜರಾತ್ ಪೊಲೀಸ್ ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.
ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ಯುವಕರನ್ನು ವಿದ್ಯುತ್ ಕಂಬಗಳಿಗೆ ಕಟ್ಟಿಹಾಕಿ ಲಾಠಿಗಳಿಂದ ಹೊಡೆಯುತ್ತಿದ್ದಾಗ ನೂರಾರು ಜನರ ಗುಂಪು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡುತ್ತಿರುವ ವೀಡಿಯೊಗಳು ವೈರಲ್ ಆಗಿದ್ದವು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋಗಳ ಬಗ್ಗೆ ಭಾರೀ ಆಕ್ರೋಶ ವ್ಯಕವಾಗಿರುವ ನಡುವೆ, ರಾಜ್ಯ ಪೊಲೀಸ್ ಮುಖ್ಯಸ್ಥ ಆಶಿಶ್ ಭಾಟಿಯಾ ನಿನ್ನೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದರು.
ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಸಮಿತಿಯು ಮುಂದಿನ ಎರಡು ದಿನಗಳಲ್ಲಿ ತನ್ನ ವರದಿಯನ್ನು ಪೊಲೀಸರಿಗೆ ಸಲ್ಲಿಸಲಿದೆ. ವೀಡಿಯೊಗಳ ಸತ್ಯಾಸತ್ಯತೆ ದೃಢಪಟ್ಟ ನಂತರ ಆರೋಪಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ತೃಣಮೂಲ ಕಾಂಗ್ರೆಸ್ ದೂರು
ಗುಜರಾತ್ ಪೊಲೀಸರು ಮುಸ್ಲಿಂ ಯುವಕರ ಮೇಲೆ ಸಾರ್ವಜನಿಕವಾಗಿ ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ತೃಣಮೂಲ ಕಾಂಗ್ರೆಸ್ ದೂರು ನೀಡಿದೆ ಎಂದು ಪಕ್ಷದ ವಕ್ತಾರ ಸಾಕೇತ್ ಗೋಖಲೆ ಶುಕ್ರವಾರ ತಿಳಿಸಿದ್ದಾರೆ.
ಎನ್ಎಚ್ಆರ್ಸಿ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ತನಿಖೆಗೆ ಪರಿಗಣಿಸದಿರುವುದು "ನಾಚಿಕೆಗೇಡಿನ ಸಂಗತಿ" ಎಂದು ಗೋಖಲೆ ಹೇಳಿದರು.
ಗುಜರಾತ್ ಪೊಲೀಸರು ಮುಸ್ಲಿಂ ಯುವಕರನ್ನು ಸಾರ್ವಜನಿಕವಾಗಿ ಥಳಿಸಿದ ವಿಷಯವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ "ಯಾರೂ ದೂರು ನೀಡಿಲ್ಲ" ಎಂದು ಭಾವಿಸಬಾರದು. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಇಂದು ಎನ್ಎಚ್ಆರ್ಸಿಗೆ ದೂರು ಸಲ್ಲಿಸಿದೆ ಎಂದು ಗೋಖಲೆ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಗುವಿಗೆ ಜನ್ಮ ನೀಡುವ ಕುರಿತು ಪತ್ನಿಯನ್ನು ಪತಿ ಬಲವಂತಪಡಿಸುವ ಹಾಗಿಲ್ಲ, ಅದು ಆಕೆಯ ಆಯ್ಕೆ: ಹೈಕೋರ್ಟ್







