ತೊಕ್ಕೊಟ್ಟು: ಒಂದು ದಿನದ ಮಗು ರಸ್ತೆ ಬದಿಯಲ್ಲಿ ಪತ್ತೆ

ಉಳ್ಳಾಲ: ರಸ್ತೆ ಬದಿಯಲ್ಲಿ ಒಂದು ದಿನದ ಮಗುವನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಅಂಬಿಕಾರೋಡಿನ ಗೇರು ಅಭಿವೃದ್ಧಿ ಕೇಂದ್ರದ ಬಳಿ ಗುರುವಾರ ನಡೆದಿದೆ.
ಈ ಬಗ್ಗೆ ಅಮರ್ ಎಂಬವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಅಮರ್ ಅವರ ಮನೆಯ ಸಮೀಪ ಮಗು ಕೂಗುವುದು ಕೇಳಿಸಿದ್ದು, ಹುಡುಕಾಡಿದಾಗ ಅವರ ಮನೆಯ ಸಮೀಪ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಕಾರಿನ ಕೆಳಗಡೆ ಬಿಳಿ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಗು ಪತ್ತೆಯಾಗಿದೆ.
ಈ ವೇಳೆ ಅಮರ್ ಅವರು ನೆರೆ ಮನೆಯವರಲ್ಲಿ ವಿಚಾರಿಸಿದ್ದಾರೆ. ಸ್ಥಳೀಯ ಜನರಿಗೂ ಮಗು ಯಾರದ್ದು ಎಂದು ಪತ್ತೆ ಹಚ್ಚಲು ಆಗಿಲ್ಲ. ಈ ಹಿನ್ನೆಲೆಯಲ್ಲಿ ಅಮರ್ ಅವರ ಮನೆಮಂದಿ ಮಗುವನ್ನು ಉಪಚರಿಸಿ, ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದಾರೆ.
ಮಗು ಯಾರದ್ದು ಎಂಬ ಬಗ್ಗೆ ಉಳ್ಳಾಲ ಪೊಲೀಸರು ವಿವಿಧ ಆಸ್ಪತ್ರೆಗಳಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಮಗುವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.