ರಸ್ತೆಯಲ್ಲಿ ಕುಳಿತಿದ್ದ ದನಗಳನ್ನು ಎಬ್ಬಿಸಲು ಹಾರ್ನ್ ಮಾಡಿದ ವ್ಯಕ್ತಿಗೆ ಹಲ್ಲೆ: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ (PTI)
ಅಹ್ಮದಾಬಾದ್,ಅ.7: ರಸ್ತೆಯಲ್ಲಿ ಠಿಕಾಣಿ ಹೂಡಿದ್ದ ಗೋವುಗಳನ್ನು ಸರಿಸಲು ಹಾರ್ನ್ ಮಾಡಿದ್ದಕ್ಕಾಗಿ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಇಲ್ಲಿಗೆ ಸಮೀಪದ ಓಗನ್ ಗ್ರಾಮದಲ್ಲಿ ನಡೆದಿದೆ.
ಅ.3ರಂದು ಈ ಘಟನೆ ನಡೆದಿದ್ದು,ಸಂತ್ರಸ್ತ ಮಯೂರಸಿನ್ಹ ಜಾಧವ್ (20) ತನ್ನ ಗ್ರಾಮದವರೇ ಆದ ಮಹೇಂದ್ರ ಭಾರ್ವಾಡ್ ಮತ್ತು ಇತರ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ಬೆಳಕಿಗೆ ಬಂದಿದೆ.
ತಾನು ತನ್ನ ಕಾರಿನಲ್ಲಿ ತಾಯಿಯೊಂದಿಗೆ ದೇವಸ್ಥಾನದಿಂದ ಮರಳುತ್ತಿದ್ದಾಗ ರಸ್ತೆಯಲ್ಲಿ ಗೋವುಗಳು ಮಲಗಿದ್ದವು. ಪಕ್ಕದಿಂದ ಹಾದು ಹೋಗಲೂ ಅವಕಾಶವಿರಲಿಲ್ಲ,ಹೀಗಾಗಿ ಹಾರ್ನ್ ಬಾರಿಸಿದ್ದೆ. ಇದನ್ನು ಪ್ರಶ್ನಿಸಿದ ಗೋವುಗಳ ಮಾಲಿಕ ಭಾರ್ವಾಡ್ ಮತ್ತು ಆತನ ಸಹಚರರು ಕಾರಿನ ಕಿಡಕಿಯ ಗಾಜನ್ನು ಹುಡಿಗೈದು,ತನ್ನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ತಡೆಯಲು ಮಧ್ಯಪ್ರವೇಶಿಸಿದ ತನ್ನ ತಾಯಿಗೂ ಹಲ್ಲೆ ನಡೆಸಿದ್ದಾರೆ ಎಂದು ಜಾಧವ ದೂರಿನಲ್ಲಿ ಆರೋಪಿಸಿದ್ದಾನೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆಯಾದರೂ,ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.





